ADVERTISEMENT

ರಾಹುಲ್‌ ‘ವಚನ ವಾಚನ’ ವೈರಲ್!

ಡಿ.ಬಿ, ನಾಗರಾಜ
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ವಿಜಯಪುರ: ಜನಾಶೀರ್ವಾದ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ವಾಚಿಸಿದ ಬಸವಣ್ಣನವರ ‘ಇವನಾರವ, ಇವನಾರವ...’ ವಚನದ ಸಾಲು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಟೀಕೆಗೊಳಗಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶನಿವಾರ ನಡೆದ ಸಮಾವೇಶದಲ್ಲಿ ಭಾಷಣ ಮಾಡಿದ ರಾಹುಲ್‌, ಆ ವೇಳೆ ಬಸವೇಶ್ವರರ ವಚನ ವಾಚಿಸಿದ್ದರು. ಇದು ಫೇಸ್‌ಬುಕ್‌ನಲ್ಲಿ ಲೈವ್‌ ಆಗಿತ್ತು. ಭಾಷಣದಲ್ಲಿ ವಚನವನ್ನು ಉಲ್ಲೇಖಿಸಿದ್ದ ಭಾಗವನ್ನಷ್ಟೇ ಎಡಿಟ್‌ ಮಾಡಿ,  14 ಸೆಕೆಂಡ್‌ಗಳ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

‘ಬಸವಾಜಿ ನೆ ಕಹಾತಾ, ‘ಇವ್ ನರ್ವಾ, ಇವ್‌ ನರ್ವಾ, ಇವ್‌ ನರ್ವಾ, ಇವ್‌ ನಮ್ವಾ, ಇವ್‌ ನಮ್ವಾ, ಇವ್‌ ನಮ್ವಾ...’ ಎಂದು ಕನ್ನಡದಲ್ಲಿ ರಾಹುಲ್‌ ಉಚ್ಚರಿಸಿರುವುದಷ್ಟೇ ಈ ವಿಡಿಯೊ ತುಣುಕಿನಲ್ಲಿದ್ದು, ಇದೀಗ ಟ್ರೋಲ್‌ ಆಗಿದೆ.

ADVERTISEMENT

ಫೇಸ್‌ಬುಕ್, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ, ವಾಟ್ಸ್‌ ಆ್ಯಪ್‌ನಲ್ಲಿ ಅಪ್‌ಲೋಡ್‌ ಆಗಿದ್ದು, ಅಸಂಖ್ಯಾತ ಜನರು ಟೀಕೆ ಮಾಡಿದ್ದಾರೆ. ಕನ್ನಡ ಭಾಷೆಗೆ ಹಾಗೂ ಬಸವೇಶ್ವರರಿಗೆ ಅಪಮಾನ ಮಾಡಲಾಗಿದೆ ಎಂಬ ಪೋಸ್ಟ್‌ಗಳು ಶನಿವಾರ ಸಂಜೆಯಿಂದಲೂ ವ್ಯಾಪಕವಾಗಿ ಹರಿದಾಡುತ್ತಿವೆ.

ರಾಹುಲ್‌ ಕುರಿತಂತೆ ವ್ಯಂಗ್ಯೋಕ್ತಿ, ಕಟು ಟೀಕೆಗಳು ಹರಿದಾಡುತ್ತಿವೆ. ವಿದೇಶದಲ್ಲಿರುವ ಕನ್ನಡಿಗರು ಸಹ ಈ ವಿಡಿಯೊ ಕ್ಲಿಪ್ಪಿಂಗ್‌ ಶೇರ್‌ ಮಾಡಿದ್ದಾರೆ. ವಚನ ಅಪಭ್ರಂಶ ಮಾಡಲಾಗಿದೆ ಎಂದು ಕಟುಶಬ್ದ ಬಳಸಿ ಟೀಕೆ ಮಾಡುತ್ತಿರುವುದು ಮುಂದುವರಿದಿದೆ.

‘ಜನಾಶೀರ್ವಾದ ಯಾತ್ರೆಯಲ್ಲಿ ರಾಹುಲ್‌ಗಾಂಧಿ ಮಾಡುತ್ತಿದ್ದ ಭಾಷಣ ಫೇಸ್‌ಬುಕ್‌ ಪೇಜ್‌ನಲ್ಲಿ ಲೈವ್‌ ಪ್ರಸಾರಗೊಳ್ಳುತ್ತಿತ್ತು. ಬರೆದುಕೊಟ್ಟ ವಚನವನ್ನು ಕನ್ನಡ ಭಾಷೆಯಲ್ಲಿ ಸ್ಪಷ್ಟವಾಗಿ ಉಚ್ಚರಿಸದೆ ಅಪಭ್ರಂಶಗೊಳಿಸಿದ್ದನ್ನು ದೇಶದ ಜನತೆಗೆ ತಿಳಿಸಬೇಕು ಎಂದು ಅಷ್ಟನ್ನು ಮಾತ್ರ ಎಡಿಟ್‌ ಮಾಡಿ ಟ್ರೋಲ್‌ ಮಾಡಲಾಗಿದೆ. 24 ತಾಸಿನೊಳಗೆ 2 ಕೋಟಿಗೂ ಹೆಚ್ಚು ಮಂದಿ ಈ ವಿಡಿಯೊ ವೀಕ್ಷಿಸಿದ್ದಾರೆ. ಅಸಂಖ್ಯಾತರು ಪ್ರತಿಕ್ರಿಯೆ ನೀಡಿದ್ದಾರೆ. ಅಸಮಾಧಾನಗೊಂಡವರು ವಿಜಯಪುರದಲ್ಲಿ ರಾಹುಲ್‌ ರೋಡ್‌ ಶೋ, ಕಾರ್ನರ್‌ ಮೀಟಿಂಗ್‌ನಲ್ಲಿ ‘ಮೋದಿ ಮೋದಿ...’  ಎಂದು ಜೈಕಾರ ಹಾಕಿದರು’ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.