ADVERTISEMENT

ರೇಡಾರ್‌ ಸಂಕೇತ ತಪ್ಪಿಸಲು ಕೆಳಮಟ್ಟದಲ್ಲಿ ಹಾರಾಟ

ಮಲೇಷ್ಯಾ ವಿಮಾನಯಾನ ಸಂಸ್ಥೆಯ ವಿಮಾನ ನಿಗೂಢವಾಗಿ ಕಣ್ಮರೆಯಾದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಕ್ವಾಲಾಲಂಪುರ (ಪಿಟಿಐ):  ನಾಪತ್ತೆ­ಯಾದ ವಿಮಾನವು ಬಂಗಾಳ ಕೊಲ್ಲಿ­ಯ ವಾಯು ಮಾರ್ಗದ ದಟ್ಟಣೆ ಲಾಭ ಪಡೆದಿರುವ ಮತ್ತು ಕನಿಷ್ಠ ಮೂರು ರಾಷ್ಟ್ರಗಳ ಸೇನಾ ರೇಡಾರ್‌­ಗಳನ್ನು ತಪ್ಪಿಸಲು ಗಿರಿ– ಕಂದರಗಳ ಮಧ್ಯೆ ಕೆಳಮಟ್ಟದಲ್ಲಿ ಹಾರಾಟ ನಡೆಸಿರುವ ಸಾಧ್ಯತೆ ಇದೆ ಎಂಬ ಪತ್ರಿಕೆಯೊಂದರ ವರದಿ ಬಗ್ಗೆ ಮಲೇಷ್ಯಾ  ಸರ್ಕಾರ ತನಿಖೆ ಕೇಂದ್ರೀಕರಿಸಿದೆ.

‘ವಿಮಾನ ಅಪಹರಿಸಿರುವ ವ್ಯಕ್ತಿಗೆ ವಾಯುಯಾನದಲ್ಲಿ ಬಳಸುವ ಸಾಧನ– ಸಲಕರಣೆಗಳ ಬಗ್ಗೆ ಮತ್ತು  ಭೂ ಮೇಲ್ಮೈ ಲಕ್ಷಣಗಳನ್ನು  ಬಳಸಿ­ಕೊಂಡು ಹೇಗೆ ರೇಡಾರ್‌ಗಳನ್ನು ತಪ್ಪಿಸಬಹುದು ಎಂಬ ಸ್ಪಷ್ಟವಾದ ಜ್ಞಾನ ಇತ್ತು. ಇದಕ್ಕೆ ‘‘ಟೆರೇನ್‌ ಮಾಸ್ಕಿಂಗ್‌’ ಎನ್ನುತ್ತಾರೆ. ಈ ವಿಧಾನದಲ್ಲಿ ಆತ ಗಿರಿ– ಕಂದರಗಳ ಆಸರೆ ಪಡೆದು ಮಾರ್ಗ ಮಧ್ಯೆಯ ಎಲ್ಲಾ ರೇಡಾರ್‌ಗಳ ಕಣ್ತಪ್ಪಿಸಿದ್ದಾನೆ.  

ಜೊತೆಗೆ ವಿಮಾನವು ಮಲೇಷ್ಯಾದ ಕೆಲಾನ್‌ತನ್‌ ಪ್ರಾಂತ್ಯ­ದಲ್ಲಿ ತೀರಾ ಕೆಳಮಟ್ಟದಲ್ಲಿ ಹಾರಾಟ ಮಾಡಿರುವುದು ನಿಜ’ ಎಂದು ‘ನ್ಯೂ ಸ್ಟ್ರೇಟ್‌  ಟೈಮ್ಸ್‌’ ದೈನಿಕ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ‘ಹೀಗೆ ಈ ವಿಮಾನ ಹಾರಾಟ ಮಾಡುತ್ತಿರುವಾಗ ಮತ್ತೊಂದು ವಿಮಾನವು ಅದಕ್ಕೆ ಎದುರಾಗಿರುವ ಸಾಧ್ಯತೆಯೂ ಇದೆ’ ಎಂದು ವರದಿ ತಿಳಿಸಿದೆ.

ಈ ವರದಿಯನ್ನು ಆಧರಿಸಿ ವಿಮಾನವು ಅಜ್ಞಾತ ಸ್ಥಳದಲ್ಲಿ ಇಳಿದಿರುವ ಮತ್ತು ವಿಮಾನದ ಎಂಜಿನ್‌ ಕಾರ್ಯನಿರ್ವಹಣೆ ಸ್ಥಗಿತಗೊಂಡಿರುವ ಇಲ್ಲವೆ ಪತನವಾಗಿರುವ ಎರಡು ಸಾಧ್ಯತೆಗಳನ್ನು ಇರಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.  

ಈ ನಿಟ್ಟಿನಲ್ಲಿ ಅತಿ ಉದ್ದನೆಯ ರನ್‌ ವೇಗಳಲ್ಲಿರುವ ಬಳಕೆಯಾಗದ ವಿಮಾನ ನಿಲ್ದಾಣಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಸಹಪೈಲಟ್‌ ವಿವಾಹಕ್ಕೆ ಭಂಗ
ಮಲೇಷ್ಯಾದ ವಿಮಾನ ನಾಪತ್ತೆಯಾಗಿರುವುದರಿಂದ  ವಿಮಾನದ ಸಹಪೈಲಟ್‌ ಫರಿಕ್‌ ಅಬ್ದುಲ್‌ ಹಮೀದ್‌ (27) ಅವರ ಪ್ರೇಮ ವಿವಾಹದ ಹೊಂಗನಸು ನುಚ್ಚುನೂರಾಗಿದೆ.

ಹಮೀದ್ ಅವರು ಏರ್‌ ಏಷ್ಯಾ ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್‌ ಆಗಿರುವ ನಾದಿರಾ ರಾಮ್ಲಿ (26) ಅವರನ್ನು ವಿವಾಹವಾಗಲು ಸಿದ್ಧತೆ ನಡೆಸಿದ್ದರು ಎಂದು ‘ಡೈಲಿ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ನಾದಿರಾ ಮತ್ತು ಹಮೀದ್‌ ಅವರು ಲಾಂಗ್‌ಕವಾಯಿ  ಪೈಲಟ್‌ ತರಬೇತಿ ಶಾಲೆಯಲ್ಲಿ ಒಟ್ಟಿಗೆ ಕಲಿತವರು. ಒಂಬತ್ತು ವರ್ಷದಿಂದ ಪರಿಚಿತರಾದ ಇವರು, ಪರಸ್ಪರ ಪ್ರೀತಿಸುತ್ತಿದ್ದರು ಎಂದು ಪತ್ರಿಕೆ ವರದಿ ಹೇಳಿದೆ.

ಹಮೀದ್‌ ಅವರು 2007ರಲ್ಲಿ ಮಲೇಷ್ಯಾ ವಿಮಾನಯಾನ ಸಂಸ್ಥೆಗೆ ಸೇರಿದರು. ನಾದಿರಾ ಅವರು ಇದೇ ವಿಮಾನಯಾನ ಸಂಸ್ಥೆಯ ಹಿರಿಯ ಪೈಲಟ್‌ ಒಬ್ಬರ ಪುತ್ರಿ.

ವಿಮಾನ ನಾಪತ್ತೆಯಾದಾಗಿನಿಂದ ಹಮೀದ್‌ ಅವರ ತಾಯಿ ವ್ಯಾಕುಲರಾಗಿದ್ದು, ಕ್ಯಾಪ್ಟನ್‌ ನಾದಿರಾ ಅವರು ಒಂದು ತಿಂಗಳು ರಜೆ ಹಾಕಿ ಹಮೀದ್‌ ಅವರ ತಾಯಿಯ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಇವರಿಬ್ಬರು ಕ್ವಾಲಾಲಂಪುರದ ಹೋಟೆಲ್‌ವೊಂದರಲ್ಲಿ ತಂಗಿದ್ದಾರೆ ಎಂದೂ ಕೆಲವು ದೈನಿಕಗಳಲ್ಲಿ ವರದಿಯಾಗಿದೆ.

ಏನಿದು ಟೆರೇನ್‌ ಮಾಸ್ಕಿಂಗ್‌?
ಬೇಹುಗಾರಿಕೆ ಇಲ್ಲವೆ ಸೇನೆಯು  ವೈಮಾನಿಕವಾಗಿ ನಡೆಸುವ ರಹಸ್ಯ ಕಾರ್ಯಾಚರಣೆಗೆ ‘ಟೆರೇನ್‌ ಮಾಸ್ಕಿಂಗ್‌’ ವಿಧಾನ ಬಳಸ­ಲಾಗು­ತ್ತದೆ. ಪೈಲಟ್‌ಗಳು ಭೂ ಮೇಲ್ಮೈ ಲಕ್ಷಣಗಳನ್ನು ಬಳಸಿಕೊಂಡೇ ತಮ್ಮ ಗುರಿಯತ್ತ ವಿಮಾನಗಳನ್ನು ಹಾರಿ­ಸು­ತ್ತಾರೆ. ಇದು ಶತ್ರು ಪಡೆಯ ವೈಮಾನಿಕ ಸಾಧನಗಳನ್ನು ಪತ್ತೆ ಹಚ್ಚುವ ಯಾವುದೇ ಸಾಧನಗಳ ನಿಗಾಕ್ಕೆ ಬರುವುದಿಲ್ಲ.

ಕಡಿಮೆ ಬೆಳಕಿದ್ದಾಗ ಈ ರೀತಿ ವಿಮಾನ ಹಾರಾಟ ನಡೆಸುವುದು ತೀರಾ ಅಪಾಯಕಾರಿ ಎಂಬುದು ತಜ್ಞರ ಅಭಿಪ್ರಾಯ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.