ADVERTISEMENT

ವೆಂಕಟೇಶನ ಇಚ್ಛೆ ಈಡೇರಲೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 18:25 IST
Last Updated 7 ಮಾರ್ಚ್ 2011, 18:25 IST

ಹೈದರಾಬಾದ್: ಕುತ್ತಿಗೆಯ ಭಾಗದಿಂದ ಕೆಳಕ್ಕೆ ಸ್ನಾಯುಗಳ ಸ್ವಾಧೀನವನ್ನೇ ಕಳೆದುಕೊಳ್ಳುವ (ಡಚೇನ್ ಮಸ್ಕುಲರ್ ಡಿಸ್ಟ್ರೋಫಿ) ಕಾಯಿಲೆಯಿಂದ ಬಳಲುತ್ತಿದ್ದ ವಿಜಯವಾಡದ ವೆಂಕಟೇಶ್ (25) ದಯಾಮರಣದ ಅವಕಾಶ ಸಿಗದೆ 2004ರ ಡಿಸೆಂಬರ್ 17ರಂದು ಕೊನೆಯುಸಿರೆಳೆದಾಗ ಆತನ ಇಚ್ಛೆ ಈಡೇರಲೇ ಇಲ್ಲ. ಒಂದು ವೇಳೆ ಸುಪ್ರೀಂ ಕೋರ್ಟ್ ಸೋಮವಾರ ನೀಡಿದ ತೀರ್ಪು ಏಳು ವರ್ಷ ಮೊದಲೇ ಹೊರಬೀಳುತ್ತಿದ್ದರೆ ಸಾಯುವ ವ್ಯಕ್ತಿಯ ಕೊನೆಯ ಆಸೆ ಈಡೇರುತ್ತಿತ್ತು....

ಹೀಗೆ ಹಲುಬುತ್ತಾರೆ ವೆಂಕಟೇಶನ ತಾಯಿ ಸುಜಾತಾ. ಇಷ್ಟಕ್ಕೂ ವೆಂಕಟೇಶನ ಕೊನೆಯ ಆಸೆ ಏನಾಗಿತ್ತು ಗೊತ್ತೇ? ತನ್ನ ದೇಹದ ಐದು ಅಂಗಗಳನ್ನು ಅಗತ್ಯ ಇದ್ದವರಿಗೆ ದಾನ ಮಾಡುವುದು.ಕಣ್ಣು ಹೊರತಾಗಿ ಬೇರೆ ಯಾವುದೇ ಅಂಗವನ್ನೂ ದಾನ ಮಾಡುವುದು ಸಾಧ್ಯವಾಗಲಿಲ್ಲ. ಕಾರಣ ಆತನಿಗೆ ದಯಾಮರಣದ ಅವಕಾಶ ಸಿಕ್ಕಿರಲಿಲ್ಲ.

ಆಂಧ್ರ ಪ್ರದೇಶ ಹೈಕೋರ್ಟ್ ವೆಂಕಟೇಶನ ದಯಾಮರಣ ಅರ್ಜಿಯನ್ನು ತಳ್ಳಿಹಾಕಿದ ಐದೇ ದಿನಗಳಲ್ಲಿ ಆತ ಕೊನೆಯುಸಿರೆಳೆದ. ಒಂದು ವೇಳೆ ಮಿದುಳು ಸತ್ತ ಸ್ಥಿತಿಯಲ್ಲೇ ಆತನ ಅಂಗದಾನಕ್ಕೆ ಅವಕಾಶ ಕಲ್ಪಿಸುತ್ತಿದ್ದರೆ ಸಾಯುತ್ತಿದ್ದ ಆತ್ಮಕ್ಕೆ ತೃಪ್ತಿಯಾದರೂ ಸಿಗುತ್ತಿತ್ತು. ಕೊನೆಗೆ ಆತ ಸತ್ತಾಗ ರಕ್ತಹೀನತೆ ಸೋಂಕು ದೇಹದ ವಿವಿಧ ಅಂಗಗಳಿಗೆ ತಗುಲಿತ್ತು. ಆಗ ಅಂಗದಾನ ಅಸಾಧ್ಯವಾಯಿತು ಎಂದು ನೆನೆಯುತ್ತಾಳೆ ಈ ಮಹಾನ್ ತಾಯಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.