ADVERTISEMENT

ಶಬರಿಮಲೆ ಬೃಹತ್ ಯೋಜನೆ ನೆನೆಗುದಿಗೆ?

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 19:30 IST
Last Updated 16 ಜನವರಿ 2011, 19:30 IST

ತಿರುವನಂತಪುರಂ (ಪಿಟಿಐ): ಈ ಮೊದಲು ನಿಗದಿಯಾಗಿದ್ದಂತೆ ರೂ 1500 ಕೋಟಿ ಮೊತ್ತದ ಶಬರಿಮಲೆ ಬೃಹತ್ ಯೋಜನೆಯು 2015ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ರೋಪ್‌ವೇ ಅಳವಡಿಸುವುದೂ ಸೇರಿ ವಿವಿಧ ಸೌಲಭ್ಯ ಒಳಗೊಂಡ ಈ ಯೋಜನೆಗೆ 2007ರಲ್ಲಿ ಅನುಮತಿ ದೊರಕಿದೆ. ಆದರೆ ಈವರೆಗೆ ಕೇವಲ ಕೆಲ ಕೋಟಿಗಳಷ್ಟು ಮಾತ್ರ ಖರ್ಚು ಮಾಡಿ ಸ್ಥಗಿತಗೊಳಿಸಲಾಗಿದೆ ಎಂದು ವಿಎಚ್‌ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕುಮ್ಮನಂ ರಾಜಶೇಖರನ್ ಟೀಕಿಸಿದ್ದಾರೆ. ಬೃಹತ್‌ಯೋಜನೆಯಡಿ ಒಂದು ವರ್ಷದೊಳಗೆ 14 ಯೋಜನೆಗಳನ್ನು ಪೂರ್ಣಗೊಳಿಸಲು ಕಳೆದ ವರ್ಷ ಜುಲೈನಲ್ಲಿ ನಡೆದ ಶಬರಿಮಲೆ ಬೃಹತ್ ಯೋಜನಾ ಮೂಲಸೌಕರ್ಯ ನಿಧಿ ಟ್ರಸ್ಟ್‌ನ ಸಭೆ ನಿರ್ಧರಿಸಿದ್ದರೂ ಯಾವುದೇ ಯೋಜನೆ ಜಾರಿಯಲ್ಲೂ ಪ್ರಗತಿ ಆಗಿಲ್ಲ.

ಯೋಜನೆ ಕಾರ್ಯಗತಗೊಳಿಸಲು ಖಾಸಗಿಯವರಿಂದ ಹಣ ಸಂಗ್ರಹಿಸಲು ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ನಿಧಿ ಸಂಗ್ರಹ ಸಮಾವೇಶ ನಡೆಸಲೂ ಯೋಜಿಸಲಾಗಿತ್ತು. ಆದರೆ ಯಾವುದೂ ಆಗಲಿಲ್ಲ. ಪಂಪಾ ಮಾರ್ಗದಲ್ಲಿ ಮರಕೂಟಂನಿಂದ ಸರಂಕುಟ್ಟಿವರೆಗೆ ಸರದಿ ಸಾಲಿನಲ್ಲಿ ನಿಲ್ಲುವ ಭಕ್ತಾದಿಗಳಿಗೆ ಕುಡಿಯುವ ನೀರು ಮತ್ತು ಆಹಾರ ಮಳಿಗೆಗಳ ಸೌಲಭ್ಯವಿರುವ ವ್ಯವಸ್ಥೆಗೆ ಟೆಂಡರ್ ಆಹ್ವಾನಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ವ್ಯವಸ್ಥೆ ಜಾರಿಯಾದರೆ, ಪಂಪಾ ಮಾರ್ಗದಲ್ಲಿ ಬೆಟ್ಟ ಹತ್ತುವ ಭಕ್ತರು ಅನುಭವಿಸುವ ಸಂಕಷ್ಟ ನಿವಾರಣೆಯಾಗುತ್ತದೆ. ಈಗ ಭಕ್ತರು ದರ್ಶನಕ್ಕಾಗಿ ನೀರು, ಆಹಾರವಿಲ್ಲದೆ ಸಾಲಿನಲ್ಲಿ ನಿಲ್ಲಬೇಕಾಗಿದೆ ಎಂದಿದ್ದಾರೆ.
ನಿಲಾಕೆಲ್ ಬಳಿ ಪರ್ಯಾಯ ಮೂಲ ಶಿಬಿರ ನಿರ್ಮಿಸುವ ಕೆಲಸವೂ ಮಂದಗತಿಯಲ್ಲಿ ಸಾಗಿದೆ.

ಬೃಹತ್ ಯೋಜನೆ ಅಲ್ಲದೆ ಅಯ್ಯಪ್ಪ ಭಕ್ತರಿಗೆ ಸೌಲಭ್ಯ ಒದಗಿಸಲು ನ್ಯಾಯಮೂರ್ತಿ ಪರಿಪೂರ್ಣನ್ ಆಯೋಗವು ತನ್ನ ವರದಿಯಲ್ಲಿ 77 ಶಿಫಾರಸುಗಳನ್ನು ಮಾಡಿದೆ. ಅನೇಕ ವರ್ಷಗಳ ನಂತರವೂ ಈ ಶಿಫಾಸುಗಳು ಕೂಡ ಮೂಲೆಗುಂಪಾಗಿವೆ ಎಂದು ಆರೋಪಿಸಿದ್ದಾರೆ.

ADVERTISEMENT

ವಿರೋಧ ಪಕ್ಷದ ಟೀಕೆ:  ಪ್ರಯಾಣಕ್ಕೆ ಅನುಕೂಲವಾಗುವಂತೆ ಬಿಡಾರಗಳನ್ನು ನಿರ್ಮಿಸಲು ಐದು ವರ್ಷಗಳ ಹಿಂದೆ ಆಗಿನ ಯುಡಿಎಫ್ ಸರ್ಕಾರ ಜಾಗವನ್ನು ಗುರುತಿಸಿದ್ದರೂ ಸರ್ಕಾರ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಉಮ್ಮನ್ ಚಾಂಡಿ ದೂರಿದ್ದಾರೆ.
ಸಮಿತಿಯ ವರದಿ ಗಮನಿಸದೆ ಸರ್ಕಾರ ಮತ್ತು ತಿರುವಾಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ನಿದ್ರಿಸುತ್ತಿವೆ ಎಂದು ವಿಎಚ್‌ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕುಮ್ಮನಂ ರಾಜಶೇಖರನ್ ಟೀಕಿಸಿದ್ದಾರೆ. ಬೃಹತ್ ಯೋಜನೆಯನ್ನು ಟಿಡಿಬಿ ಮೂಲೆಗುಂಪು ಮಾಡಿದೆ ಎಂಬ ಟೀಕೆಗಳು ಕೇಳಿ ಬಂದಿವೆ.

ಹಿಂದೂ ಸಂಘಟನೆಗಳ ಪ್ರಕಾರ, ಪ್ರತಿವರ್ಷ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿರುವ ಪುಲ್‌ಮೇಡು ಮಾರ್ಗದಲ್ಲಿ ಹೆಚ್ಚಿನ ಗುಂಪು ನಿಯಂತ್ರಿಸಲು ಹೆಚ್ಚಿನ ಪೊಲೀಸರನ್ನು ನೇಮಿಸಬೇಕೆಂಬ ವರದಿಯ ಸಲಹೆ ಬಗ್ಗೆಯೂ ಸರ್ಕಾರ ಗಮನ ಹರಿಸಲಿಲ್ಲ.

ತನಿಖೆ ಆರಂಭ: ಕಾಲ್ತುಳಿತ ಘಟನೆಗೆ ಕಾರಣ ಪತ್ತೆ ಹಚ್ಚಲು ಭಾನುವಾರ ಕೇರಳ ಪೊಲೀಸ್‌ನ ಅಪರಾಧ ವಿಭಾಗದ ಎಸ್‌ಪಿ ಎಸ್. ಸುರೇಂದ್ರನ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದರು. ವಿಧಿವಿಜ್ಞಾನ ತಜ್ಞರು ಕೂಡ ಘಟನೆ ನಡೆದ ಪುಲ್ಲುಮೇಡು ಪ್ರದೇಶಕ್ಕೆ ಭೇಟಿ ನೀಡಿದರು ಎನ್ನಲಾಗಿದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.