ADVERTISEMENT

ಸಲಿಂಗ ಕಾಮ: ಅಪರಾಧ ಮುಕ್ತಗೊಳಿಸಲು ಕೇಂದ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 10:25 IST
Last Updated 23 ಫೆಬ್ರುವರಿ 2012, 10:25 IST

ನವದೆಹಲಿ (ಪಿಟಿಐ): ಸಲಿಂಗ ಕಾಮವನ್ನು ~ಅತ್ಯಂತ ಅನೈತಿಕ~ ಮತ್ತು ~ಸಾಮಾಜಿಕ ವ್ಯವಸ್ಥೆಗೆ ವಿರುದ್ಧ~ ಎಂಬುದಾಗಿ ಹೇಳುವ ಮೂಲಕ ಕೇಂದ್ರ ಗೃಹ ಸಚಿವಾಲಯವು ಸಲಿಂಗ ಕಾಮವನ್ನು ಅಪರಾಧ ಮುಕ್ತವನ್ನಾಗಿಸುವುದನ್ನು ಗುರುವಾರ ಸುಪ್ರೀಂಕೋರ್ಟಿನಲ್ಲಿ ಬಲವಾಗಿ ವಿರೋಧಿಸಿತು.

ಗೃಹ ಸಚಿವಾಲಯದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಅಡಿಷನಲ್ ಸಾಲಿಸಿಟರ್ ಜನರಲ್ (ಎ ಎಸ್ ಜಿ) ಪಿ.ಪಿ. ಮಲ್ಹೋತ್ರ ಅವರು ~ಭಾರತೀಯ ಸಮಾಜವು ಇತರ ರಾಷ್ಟ್ರಗಳಿಗಿಂತ ಸಂಪೂರ್ಣ ಭಿನ್ನ. ವಿದೇಶಗಳಲ್ಲಿ ಇರುವ ಕ್ರಮಗಳನ್ನು ಭಾರತೀಯ ಸಮಾಜ ಅನುಕರಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.

~ಸಲಿಂಗ ಕಾಮ ಅತ್ಯಂತ ಅನೈತಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ವಿರುದ್ಧ. ಇಂತಹ ಕೃತ್ಯಗಳ ಮೂಲಕ ರೋಗಗಳನ್ನು ಹರಡುವ ವ್ಯಾಪಕ ಸಾಧ್ಯತೆಗಳಿವೆ~ ಎಂದೂ ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಮತ್ತು ಎಸ್.ಜೆ. ಮುಖ್ಯೋಪಾಧ್ಯಾಯ ಅವರನ್ನು ಒಳಗೊಂಡ ಪೀಠದ ಮುಂದೆ ಮಲ್ಹೋತ್ರ ಅವರು ಪ್ರತಿಪಾದಿಸಿದರು.

~ನಮ್ಮ ಸಂವಿಧಾನ ವಿಭಿನ್ನವಾದುದು. ನಮ್ಮ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳೂ ಇತರ ರಾಷ್ಟ್ರಗಳಿಗಿಂತ ವಿಭಿನ್ನ. ಆದ್ದರಿಂದ ನಾವು ವಿದೇಶಗಳನ್ನು ಅನುಕರಿಸಲಾಗದು~ ಎಂದು ಅವರು ನುಡಿದರು. ಸಲಿಂಗ ಕಾಮಕ್ಕೆ ಸಾಮಾಜಿಕ ಅನುಮೋದನೆ ಇಲ್ಲದೇ ಇರುವ ಕಾರಣವೊಂದೇ ಅದನ್ನು ~ಅಪರಾಧ ಕೃತ್ಯ~ವನ್ನಾಗಿ ಮಾಡಲು ಸಾಕು ಎಂದೂ ಮಲ್ಹೋತ್ರ ಹೇಳಿದರು.

ಭಾರತೀಯ ಸಮಾಜ ಸಲಿಂಗ ಕಾಮವನ್ನು ಅನುಮೋದಿಸುವುದಿಲ್ಲ. ಕಾನೂನು ಸಮಾಜದಿಂದ ಪ್ರತ್ಯೇಕವಾಗಿ ಇರಲು ಸಾಧ್ಯವಿಲ್ಲ ಎಂದೂ 2009ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ವಿರೋಧಿಸುತ್ತಾ ಅವರು ಪ್ರತಿಪಾದಿಸಿದರು.

ದೆಹಲಿ ಹೈಕೋರ್ಟ್ 2009ರ ತನ್ನ ಆದೇಶದಲ್ಲಿ ಸಲಿಂಗ ಕಾಮವನ್ನು ಅಪರಾಧ ಮುಕ್ತವನ್ನಾಗಿ ಮಾಡಿತ್ತು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅಸಹಜ ಅಪರಾಧಗಳು) ಪ್ರಕಾರ ಸಲಿಂಗ ಕಾಮವು ಗರಿಷ್ಠ  ಜೀವಾವಧಿ ಶಿಕ್ಷೆ ಯೋಗ್ಯವಾದ ಕ್ರಿಮಿನಲ್ ಅಪರಾಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.