ADVERTISEMENT

ಸಾರ್ವಜನಿಕ ದೇಣಿಗೆ ಸ್ವಂತ ಟ್ರಸ್ಟ್‌ಗೆ ಬಳಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST

ನವದೆಹಲಿ, (ಐಎಎನ್‌ಎಸ್): ಭ್ರಷ್ಟಾಚಾರ ವಿರೋಧಿ ಹೋರಾಟಗಾರ  ಹಜಾರೆ ನೇತೃತ್ವದ `ಇಂಡಿಯಾ ಅಗೇನ್‌ಸ್ಟ್ ಕರಪ್ಷನ್~ ಸಂಘಟನೆಗೆ ಸಾರ್ವಜನಿಕರು ನೀಡಿದ ದೇಣಿಗೆಯಲ್ಲಿ ಅಂದಾಜು 70-80 ಲಕ್ಷ ರೂಪಾಯಿಯನ್ನು ಅಣ್ಣಾ ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ತಮ್ಮ ಸ್ವಂತ ಟ್ರಸ್ಟ್‌ಗೆ ಬಳಸಿಕೊಂಡಿದ್ದಾರೆ ಎಂದು ತಂಡದಿಂದ ಹೊರ ಬಂದಿರುವ ಸ್ವಾಮಿ ಅಗ್ನಿವೇಶ್ ಆರೋಪಿಸಿದ್ದಾರೆ.

`ಅಣ್ಣಾ ಹಜಾರೆ ಆಗಸ್ಟ್‌ನಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ 12 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದಾಗ ಕೇಜ್ರಿವಾಲ್ ಸಾರ್ವಜನಿಕರಿಂದ 70-80 ಲಕ್ಷ ರೂಪಾಯಿಗಳನ್ನು ದೇಣಿಗೆ ಸ್ವೀಕರಿಸಿದ್ದು, ಇದನ್ನು ಬೇರೆ ಉದ್ದೇಶಕ್ಕಾಗಿ ಬಳಸಿದ್ದಾರೆ. ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ತೊಡಗಿರುವವರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ದುರದೃಷ್ಟಕರ~ ಎಂದು ಮ್ಯಾಗ್ಸೇಸೆ ಪುರಸ್ಕೃತ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಅಗ್ನಿವೇಶ್ ದೂರಿದ್ದಾರೆ.

ಇಂಡಿಯಾ ಅಗೇನ್‌ಸ್ಟ್ (ಐಎಸಿ) ಸಮಿತಿ ಸಂಸ್ಥಾಪಕ ಸದಸ್ಯರೂ ಆದ ಅಗ್ನಿವೇಶ್, ಐಎಸಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವಂತೆ ಹಲವು ಸಭೆಗಳಲ್ಲಿ ಕೇಜ್ರಿವಾಲ್ ಅವರಿಗೆ ಸೂಚಿಸಿದ್ದರೂ ಅದನ್ನು ಮಾಡಲಿಲ್ಲ ಎಂದಿದ್ದಾರೆ.

ಕೇಜ್ರಿವಾಲ್ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ನೀಡಿದ ದೇಣಿಗೆಯನ್ನು ತಮ್ಮ ಪಬ್ಲಿಕ್ ಕಾಸ್ ರೀಸರ್ಚ್ ಫೌಂಡೇಶನ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ಲಕ್ಷಾಂತರ ಜನರಿಗೆ ಇದು ಆಘಾತಕಾರಿ ಸಂಗತಿ. ಸಾರ್ವಜನಿಕರಿಂದ ಬಂದ ವಂತಿಗೆಯ ಮೊತ್ತ ಪ್ರಕಟಿಸುವಂತೆ ಅಣ್ಣಾ ಹಜಾರೆ ಅವರು ಹಲವಾರು ಬಾರಿ ಸೂಚಿಸಿದ್ದರೂ ಕೇಜ್ರಿವಾಲ್ ಹಾಗೆ ಮಾಡಲಿಲ್ಲ ಎಂದು ದೂರಿದ್ದಾರೆ.

ಅಣ್ಣಾ ತಂಡದ ಕಿರಣ್ ಬೇಡಿ ವಿರುದ್ಧ ಕಾರ್ಯಕ್ರಮದ ಸಂಘಟಕರಿಂದ ದುಬಾರಿ ವಿಮಾನ ಪ್ರಯಾಣದ ದರ ಪಡೆದ ಆರೋಪ ಕೇಳಿಬಂದ ಬೆನ್ನಲ್ಲೇ  ಕೇಜ್ರಿವಾಲ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಇದರಿಂದ ಅಣ್ಣಾ ಬಳಗಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿವಾದ ಕೇಳಿಬಂದಂತೆ ಆಗಿದೆ. ಅಗ್ನಿವೇಶ ಅವರ ಆರೋಪಕ್ಕೆ ಪ್ರತ್ರಿಕ್ರಿಯೆ ನೀಡಿರುವ ಕೇಜ್ರಿವಾಲ್, ಆಪಾದನೆಗಳಿಗೆ ಸಾಕ್ಷ್ಯ ಒದಗಿಸಲು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.