ಹೈದರಾಬಾದ್ (ಪಿಟಿಐ): ಪಕ್ಷದ ಕಾರ್ಯಕರ್ತರು ಮತ್ತು ಮತದಾರರನ್ನು ಭೇಟಿ ಮಾಡಲು ಕೇಂದ್ರ ಸಚಿವ ಚಿರಂಜೀವಿ ಮತ್ತು ಸೀಮಾಂಧ್ರ ಭಾಗದ ಕಾಂಗ್ರೆಸ್ ನಾಯಕರು ಕರಾವಳಿ ಆಂಧ್ರ ಮತ್ತು ರಾಯಲಸೀಮಾ ಪ್ರದೇಶದಲ್ಲಿ ‘ಬಸ್ ಯಾತ್ರೆ’ ಕೈಗೊಳ್ಳಲಿದ್ದಾರೆ.
ಆಂಧ್ರವಿಭಜನೆಗೆ ಕೈಗೊಂಡ ಏಕಪಕ್ಷೀಯ ನಿರ್ಧಾರದಿಂದ ಸಿಟ್ಟಿಗೆದ್ದಿರುವ ಜನರ ಕೋಪ ಶಮನ ಮಾಡಲು ಕೈಗೊಂಡಿರುವ ಯಾತ್ರೆ ಇದಾಗಿದೆ.
‘ಶ್ರೀಕಾಕುಳಂದಿಂದ ಅನಂತಪುರದವರೆಗೆ ಇದೇ 21ರಿಂದ 27ರ ವರೆಗೆ ಪಕ್ಷದ ಕಾರ್ಯಕರ್ತರ ಸಭೆ ಸಂಘಟಿಸಲಾಗಿದೆ. ಆ ಸಭೆಯಲ್ಲಿ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಹೆಚ್ಚಿಸಲಾಗುವುದು’ ಎಂದು ಪಕ್ಷ ಹೇಳಿದೆ.
‘ ಆಂಧ್ರಪ್ರದೇಶ ವಿಭಜನೆ ನಿರ್ಧಾರದ ಉದ್ದೇಶ ಮತ್ತು ವಿಭಜನೆಯಿಂದ ಯಾವ ಪ್ರಯೋಜನ ಆಗಲಿದೆ ಎನ್ನುವುದನ್ನು ನಾವು
ಜನರಿಗೆ ತಿಳಿಸುತ್ತೇವೆ’ ಎಂದು ಸೀಮಾಂಧ್ರ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಚಿರಂಜೀವಿ ಸುದ್ದಿಗಾರರಿಗೆ ತಿಳಿಸಿದರು.
‘ಸೀಮಾಂಧ್ರದ ಪ್ರತಿ ಜಿಲ್ಲೆಗೆ ಹೋಗಿ ಕಾರ್ಯಕರ್ತರನ್ನು ಭೇಟಿ ಮಾಡಿ ಈಗಿನ ಬೆಳವಣಿಗೆ ಮತ್ತು ಮುಂದೆ ಕೈಗೊಳ್ಳುವ ನಿರ್ಧಾರ ಅವರಿಗೆ ತಿಳಿಸಲು ಈ ಬಸ್ ಯಾತ್ರೆ ಕೈಗೊಳ್ಳಲಾಗಿದೆ’ ಎಂದು ಹಿರಿಯ ಕಾಂಗ್ರೆಸ್ ನಾಯಕ
ಅನಂ ರಾಮನಾರಾಯಣ ರೆಡ್ಡಿ ಹೇಳಿದರು.