ADVERTISEMENT

ಸೇನಾಪಡೆ ನಿಯೋಜಿತ ಮುಖ್ಯಸ್ಥ ವಿಕ್ರಮ್‌ಸಿಂಗ್ ನೇಮಕ:ಸುಪ್ರೀಂನಿಂದ ಪಿಐಎಲ್ ವಜಾ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ನವದೆಹಲಿ: ವಿಕ್ರಮ್‌ಸಿಂಗ್ ಅವರನ್ನು ಸೇನೆಯ ಮುಂದಿನ ಮುಖ್ಯಸ್ಥರಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ `ಸಾರ್ವಜನಿಕ ಹಿತಾಸಕ್ತಿ ಅರ್ಜಿ~ (ಪಿಐಎಲ್) ಅನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿತು. ಇದರಿಂದಾಗಿ ನಿಯೋಜಿತ ಸೇನಾ ಮುಖ್ಯಸ್ಥರಿಗೆ ಎದುರಾಗಿದ್ದ ಆತಂಕ ನಿವಾರಣೆ ಆಗಿದೆ.

`ನಾವು ವಿಕ್ರಮ್‌ಸಿಂಗ್ ವಿರುದ್ಧದ ಆರೋಪಗಳು ಹಾಗೂ ಕೇಂದ್ರ ಸರ್ಕಾರ ಸಲ್ಲಿಸಿದ ಎಲ್ಲ ದಾಖಲೆಗಳನ್ನು ಎಚ್ಚರಿಕೆಯಿಂದ ಗಮನಿಸಿದ್ದೇವೆ. ನಿಯೋಜಿತ ಸೇನಾ ಮುಖ್ಯಸ್ಥರ ನೇಮಕಾತಿ ರದ್ದುಪಡಿಸಲು ಯಾವುದೇ ಸಮರ್ಥನೀಯ ಕಾರಣವೂ ಕಾಣುತ್ತಿಲ್ಲ~ ಎಂದು  ನ್ಯಾಯಮೂರ್ತಿಗಳಾದ ಆರ್.ಎಂ. ಲೋಧ ಹಾಗೂ ಎಚ್.ಎಲ್. ಗೋಖಲೆ ಅವರನ್ನು ಒಳಗೊಂಡ ಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡುವ ಮೊದಲು ಹೇಳಿತು.

ವಿಕ್ರಮ್‌ಸಿಂಗ್ ನೇಮಕ ಪ್ರಶ್ನಿಸಿ ನೌಕಾಪಡೆ ಮಾಜಿ ಮುಖ್ಯಸ್ಥ ಅಡ್ಮಿರಲ್ ಎಲ್. ರಾಮದಾಸ್ ಹಾಗೂ ಮಾಜಿ ಮುಖ್ಯ ಚುನಾವಣಾ ಕಮಿಷನರ್ ಎನ್. ಗೋಪಾಲಸ್ವಾಮಿ ಅವರನ್ನು ಒಳಗೊಂಡಂತೆ ಎಂಟು ಮಂದಿ ನಿವೃತ್ತ ಅಧಿಕಾರಿಗಳು ಹಾಗೂ ಹಾಲಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ವಿಕ್ರಮ್‌ಸಿಂಗ್ ಅವರಿಗೆ ಸೇರಿದ  ರಹಸ್ಯ ಸೇವಾ ದಾಖಲೆಗಳನ್ನು ಪರಿಶೀಲಿಸಿತು.

`ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ನ್ಯಾಯಾಲಯದಲ್ಲಿ ಬಹಿರಂಗ ವಿಚಾರಣೆ ನಡೆಸದೆ ರಹಸ್ಯ ವಿಚಾರಣೆ ನಡೆಸಬೇಕು~ ಎಂಬ ಅರ್ಜಿದಾರರ ಮನವಿಯನ್ನು ಪೀಠ ಪುರಸ್ಕರಿಸಲಿಲ್ಲ. `ಅರ್ಜಿಯಲ್ಲಿ ಮಾಡಲಾಗಿರುವ ಆರೋಪಗಳು ಈಗಾಗಲೇ ಮಾಧ್ಯಮಗಳಲ್ಲಿ ಬಹಿರಂಗವಾಗಿದ್ದು ರಹಸ್ಯವಾಗಿ ವಿಚಾರಣೆ ನಡೆಸುವುದರಲ್ಲಿ ಅರ್ಥವಿಲ್ಲ~ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಅರ್ಜಿದಾರರು ಅರ್ಜಿಯಲ್ಲಿ ಈಗಿನ ಸೇನಾ ಮುಖ್ಯಸ್ಥ ವಿಜಯ ಕುಮಾರ್‌ಸಿಂಗ್ ಅವರ ವಯಸ್ಸಿನ ವಿವಾದ ಕುರಿತು ಪ್ರಸ್ತಾಪ ಮಾಡಿದ್ದರು. ಆದರೆ, ಸುಪ್ರೀಂ ಕೋರ್ಟ್ ಈಗಾಗಲೇ ಈ ವಿವಾದವನ್ನು ಇತ್ಯರ್ಥಪಡಿಸಿದ್ದು, ಮತ್ತೆ ಅದನ್ನು ಕೆದಕುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ಸರ್ಕಾರದ ಪರ ಹಾಜರಾದ ಅಟಾರ್ನಿ ಜನರಲ್ ಜಿ.ಇ ವಹನ್ವತಿ ಹಾಗೂ ಸಾಲಿಸಿಟರ್ ಜನರಲ್ ರೋಹಿಂಟನ್ ಎಫ್. ನಾರಿಮನ್ ಸರ್ಕಾರದ ತೀರ್ಮಾನವನ್ನು ಬಲವಾಗಿ ಸಮರ್ಥಿಸಿಕೊಂಡರು.

`ದುರುದ್ದೇಶದಿಂದ  ಅರ್ಜಿ ಸಲ್ಲಿಸಲಾಗಿದೆ. ಸೇನಾ ಮುಖ್ಯಸ್ಥರ ವಯಸ್ಸಿನ ವಿವಾದವನ್ನು ಮತ್ತೆ ಕೆದಕಲಾಗಿದೆ. ಸಿಖ್ಖರ ಗುಂಪುಗಳು ವಿಕ್ರಮ್‌ಸಿಂಗ್ ಪರ ಲಾಬಿ ಮಾಡುತ್ತಿವೆ ಎಂದು ಆರೋಪಿಸುವ ಮೂಲಕ ನೇಮಕಾತಿಗೆ ಮತೀಯ ಬಣ್ಣ ಹಚ್ಚಲಾಗುತ್ತಿದೆ~ ಎಂದು ದೂರಿದರು.

`ಜಮ್ಮು- ಕಾಶ್ಮೀರದಲ್ಲಿ ನಡೆದ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ವಿಕ್ರಮ್‌ಸಿಂಗ್ ವಿರುದ್ಧ ಅಲ್ಲಿನ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಕಾಂಗೊಗೆ ವಿಶ್ವಸಂಸ್ಥೆ ಶಾಂತಿ ಪಡೆ ಭಾಗವಾಗಿ ತೆರಳಿದ್ದ ಭಾರತೀಯ ಪಡೆ ಮುಖ್ಯಸ್ಥರಾಗಿದ್ದ ಸಿಂಗ್ ತಮ್ಮ ತಂಡದ ಅಶಿಸ್ತು ಮತ್ತು ಅವ್ಯವಹಾರಗಳನ್ನು ಹತ್ತಿಕ್ಕಲು ವಿಫಲರಾಗಿ ಟೀಕೆ ಎದುರಿಸಿದ್ದಾರೆ~ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ಅರ್ಜಿದಾರರು ಮಾಡಿರುವ ಆರೋಪಗಳನ್ನು ನೇಮಕಾತಿಗಾಗಿರುವ ಸಂಪುಟ ಸಮಿತಿ ಮುಂದೆ ಇಡಲಾಗಿತ್ತೆ. ಸಮಿತಿ ಈ ಆರೋಪಗಳನ್ನು ಪರಿಶೀಲಿಸಿದೆಯೇ ಎಂದು ನ್ಯಾಯಾಲಯ ಸರ್ಕಾರವನ್ನು ಕೇಳಿತು. ಅರ್ಜಿದಾರರು ಮಾಡಿರುವ ಎಲ್ಲ ಆರೋಪಗಳನ್ನು ಬಲವಾಗಿ ತಳ್ಳಿ ಹಾಕಿದ ಸರ್ಕಾರ ವಿಕ್ರಮ್‌ಸಿಂಗ್ ನೇಮಕಾತಿ ಪಾರದರ್ಶಕವಾಗಿ ನಡೆದಿದೆ ಎಂದು ತಿಳಿಸಿತು.     ಸೇನೆ (ಪೂರ್ವ) ಕಮಾಂಡರ್ ಆಗಿರುವ ವಿಕ್ರಮ್‌ಸಿಂಗ್ ಮೇ ಅಂತ್ಯಕ್ಕೆ ನಿವೃತ್ತರಾಗಲಿರುವ ಸೇನೆ ಮುಖ್ಯಸ್ಥ ವಿ.ಕೆ. ಸಿಂಗ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.