ADVERTISEMENT

ಹಿಂದುಳಿದ ದೇಶಗಳಿಗೆ ನೆರವು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 17:55 IST
Last Updated 18 ಫೆಬ್ರುವರಿ 2011, 17:55 IST

ನವದೆಹಲಿ (ಐಎಎನ್‌ಎಸ್): ತೀರಾ ಹಿಂದುಳಿದ ದೇಶಗಳಲ್ಲಿ (ಎಲ್‌ಡಿಸಿ) ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಭಾರತ ಇನ್ನೂ 500 ದಶಲಕ್ಷ ಡಾಲರ್‌ಗಳ ನೆರವು ನೀಡಲಿದ್ದು, ತನ್ನ ಅಭಿವೃದ್ಧಿ ಕಾರ್ಯಗಳ ಅನುಭವ ಹಂಚಿಕೊಳ್ಳಲೂ ಮುಂದಾಗಿದೆ.

‘ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ಮೂಲಭೂತ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ಬೆಂಬಲ ನೀಡುತ್ತದೆ. ನಮ್ಮ ಜನರ ಆರ್ಥಿಕ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಫಲವಾಗಿರುವುದಕ್ಕೆ ನಮಗೆ ತೃಪ್ತಿ ಇದೆ. ಈ ಅಭಿವೃದ್ಧಿಯ ಅನುಭವವನ್ನು ತೀರಾ ಹಿಂದುಳಿದ ರಾಷ್ಟ್ರಗಳ ನಮ್ಮ ಸಹವರ್ತಿಗಳ ಜತೆಗೆ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ’ ಎಂದು ವಿದೇಶಾಂಗ ವ್ಯವಹಾರ ಸಚಿವ ಎಸ್. ಎಂ. ಕೃಷ್ಣ ಅವರು ಶುಕ್ರವಾರ ಇಲ್ಲಿ ಎಲ್‌ಡಿಸಿಗಳ ಎರಡು ದಿನಗಳ ಸಚಿವರ ಮಟ್ಟದ ಸಭೆ ಉದ್ಘಾಟಿಸಿ ತಿಳಿಸಿದರು.

‘ದಕ್ಷಿಣ-ದಕ್ಷಿಣ ಸಹಕಾರ’ ವೃದ್ಧಿಸುವುದು ಈ ಸಭೆಯ ಉದ್ದೇಶ. ಇದೇ ಆಶಯಕ್ಕೆ ಪೂರಕವಾಗಿ ತೀರಾ ಹಿಂದುಳಿದ ದೇಶಗಳಿಗೆ ಮುಂದಿನ 5 ವರ್ಷಗಳಲ್ಲಿ 500 ದಶಲಕ್ಷ ಡಾಲರ್ ಸಾಲವನ್ನು ದೇಶ ಒದಗಿಸಲಿದೆ ಎಂದು ಸಚಿವರು ತಿಳಿಸಿದರು. ಭಾರತ ಇದುವರೆಗೆ ಎಲ್‌ಡಿಸಿಗಳಿಗೆ 4.3 ಶತಕೋಟಿ ಡಾಲರ್‌ಗಳ ಸಾಲ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.