ADVERTISEMENT

ಹಿಂದೂಸ್ತಾನ ಇತರರನ್ನು ಒಳಗೊಂಡ ಹಿಂದೂಗಳ ದೇಶ: ಮೋಹನ್‌ ಭಾಗವತ್‌

ಏಜೆನ್ಸೀಸ್
Published 28 ಅಕ್ಟೋಬರ್ 2017, 10:07 IST
Last Updated 28 ಅಕ್ಟೋಬರ್ 2017, 10:07 IST
ಮೋಹನ್‌ ಭಾಗವತ್‌
ಮೋಹನ್‌ ಭಾಗವತ್‌   

ಇಂಧೋರ್‌: ‘ಹಿಂದೂಸ್ತಾನ ಹಿಂದೂಗಳ ರಾಷ್ಟ್ರ. ಆದರೆ, ಇದರ ಅರ್ಥ ಬೇರೆಯವರು ಇಲ್ಲ ಎಂದಲ್ಲ. ಇತರರನ್ನು ಒಳಗೊಂಡಿದೆ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ತಿಳಿಸಿದ್ದಾರೆ.

ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಆರ್‌ಎಸ್‌ಎಸ್‌ ಸ್ವಯಂ ಸೇವಕರನ್ನು ಉದ್ದೇಶಿಸಿ ಶುಕ್ರವಾರ ಮೋಹನ್‌ ಭಾಗವತ್‌ ಮಾತನಾಡಿದರು.

ಇದೇ ವೇಳೆ ‘ಕೇವಲ ಸರ್ಕಾರದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಸಮಾಜದಲ್ಲಿ ಬದಲಾವಣೆಯ ಅಗತ್ಯ ಇದೆ’ ಎಂದರು.

ADVERTISEMENT

ಜರ್ಮನಿ ಯಾರ ದೇಶ? ಅದು ಜರ್ಮನ್‌ಗಳ ದೇಶ. ಬ್ರಿಟನ್‌ ದೇಶ ಅದು ಬ್ರಿಟಿಷರದ್ದು, ಅಮೆರಿಕ ದೇಶ ಅಮೆರಿಕನ್‌ರದ್ದು, ಅದೇ ರೀತಿ ಹಿಂದೂಸ್ತಾನ ಹಿಂದೂಗಳ ದೇಶ. ಆದರೆ, ಹಿಂದೂಸ್ತಾನ ಬೇರೆಯವರ ದೇಶ ಎಂದಲ್ಲ. ಭಾರತ ಮಾತೆಯ ಎಲ್ಲ ಮಕ್ಕಳು, ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಬದುಕುತ್ತಿರುವವರೆಲ್ಲರೂ ಹಿಂದೂಗಳೇ ಎಂದು ಹೇಳಿದ್ದಾರೆ.

‘ಒಬ್ಬ ನಾಯಕ ಅಥವಾ ಒಂದು ಪಕ್ಷದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಅದಕ್ಕೆ ಬದಲಾವಣೆ ಅಗತ್ಯ. ಪುರಾತನ ಕಾಲದಲ್ಲಿ ದೇಶದ ಅಭಿವೃದ್ಧಿಗಾಗಿ ದೇವರ ಮೋರೆ ಹೋಗುತ್ತಿದ್ದರು. ಆದರೆ, ಇದು ಕಲಿಯುಗ ಜನ ಸರ್ಕಾರದ ಕಡೆಗೆ ನೋಡುತ್ತಾರೆ. ವಾಸ್ತವವಾಗಿ ಸಮಾಜಕ್ಕೆ ತಕ್ಕಂತೆ ಸರ್ಕಾರ ಕೆಲಸ ಮಾಡುತ್ತಿದೆ’ ಎಂದರು.

‘ಸಮಾಜ ಸರ್ಕಾರದ ತಂದೆಯಿದ್ದಂತೆ. ಸರ್ಕಾರ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತದೆಯೇ ಹೊರತು ಸಮಾಜವನ್ನು ಬದಲಾಯಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ. ಸಮಾಜದಲ್ಲಿ ಬದಲಾವಣೆಯಾದರೆ ಅದನ್ನು ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಕಾಣಬಹುದು’ ಎಂದರು. 

ಭಾರತವನ್ನು ಶಕ್ತಿಯುತ, ಶ್ರೀಮಂತ ದೇಶವನ್ನಾಗಿಸುವ ನಿಟ್ಟಿನಲ್ಲಿ ದೇಶದ ಜನರು ತಮ್ಮ ಮನಸ್ಸಿನಲ್ಲಿರುವ ತಾರತಮ್ಯವನ್ನು ದೂರ ಮಾಡಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.