ADVERTISEMENT

ಮಹದಾಯಿ: ಕೇಂದ್ರದ ವಿರುದ್ಧ ದೂರು, ಎನ್‌ಜಿಟಿ ಮೊರೆ ಹೋದ ಗೋವಾ ಫಾರ್ವರ್ಡ್‌ ಪಾರ್ಟಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 19:56 IST
Last Updated 4 ನವೆಂಬರ್ 2019, 19:56 IST
   

ನವದೆಹಲಿ: ಮಹದಾಯಿ, ಕಳಸಾ–ಬಂಡೂರಿ ನಾಲೆಗಳ ತಿರುವು ಯೋಜ ನೆಗೆ ಅನುಮತಿ ನೀಡಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಗೋವಾ ಫಾರ್ವರ್ಡ್‌ ಪಾರ್ಟಿ (ಜಿಎಫ್‌ಪಿ)ಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಗೆ ದೂರು ಸಲ್ಲಿಸಿದೆ.

ಕೇಂದ್ರ ಸರ್ಕಾರವು ಗೋವಾದ ಆಕ್ಷೇಪದ ನಡುವೆಯೂ ಯೋಜನೆಗೆ ಏಕಪಕ್ಷೀಯವಾಗಿ ಅನುಮತಿ ನೀಡಿರು ವುದು ಸರಿಯಲ್ಲ ಎಂದು ಪಕ್ಷದ ಅಧ್ಯಕ್ಷ ವಿಜಯ್‌ ಸರದೇಸಾಯಿ ಸೋಮವಾರ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ನಡೆಯಲಿರುವ ಉಪ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡೇ ಕೇಂದ್ರವು ಪರಿಸರ ಇಲಾಖೆಯ ಅನುಮತಿ ನೀಡಿದೆ. ಪರಿಸರಕ್ಕೆ ಧಕ್ಕೆ ಉಂಟು ಮಾಡಬಲ್ಲ ಯೋಜನೆಯನ್ನು ವಿರೋಧಿಸಿ ಗೋವಾ ನಡೆಸಿರುವ ಹೋರಾಟ ಲೆಕ್ಕಿಸದ ಕೇಂದ್ರ ಸರ್ಕಾರ ಕರ್ನಾಟಕದ ಪರವಾಗಿ ನಿಲ್ಲಲು ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

ಮಹದಾಯಿ ನದಿ ಹರಿದಿರುವ ಪಶ್ಚಿಮಘಟ್ಟದ ಪರಿಸರಕ್ಕೆ ಈ ಯೋಜನೆ ಯಿಂದಾಗಿ ತೀವ್ರ ಧಕ್ಕೆಯಾಗಲಿದೆ ಎಂದೂ ಅವರು ಎನ್‌ಜಿಟಿಗೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.

ಸಚಿವ ಜಾವಡೇಕರ್ ಭೇಟಿ ಮಾಡಿದ ಗೋವಾ ನಿಯೋಗ
ಪಣಜಿ: ಕಳಸಾ ಬಂಡೂರಿ ಯೋಜನೆಗೆ ಪರಿಸರ ಇಲಾಖೆ ಅನುಮೋದನೆ ನೀಡಿದೆ ಎಂಬ ಹಿನ್ನೆಲೆಯಲ್ಲಿ ಆತಂಕ ವ್ಯಕ್ತಪಡಿಸಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ನೇತೃತ್ವದ ಸರ್ವಪಕ್ಷಗಳ ನಿಯೋಗ ಸೋಮವಾರ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿದ್ದ ನಿಯೋಗದಲ್ಲಿ ಜಲಸಂಪನ್ಮೂಲ ಖಾತೆ ಸಚಿವ ಫಿಲಿಪ್‌ ನೆರೆ ರೋಡ್ರಿಗ್ರಸ್, ವಿರೋಧಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್, ಗೋವಾ ಫಾರ್ವರ್ಡ್‌ ಪಕ್ಷದ ವಿಜಯ್‌ ಸರ್‌ದೇಸಾಯಿ, ಎಂಜಿಪಿ ನಾಯಕ ಸುದಿನ್‌ ಧಾವಲಿಕರ್‌ ಇದ್ದರು.

ಭೇಟಿ ಫಲಪ್ರದವಾಗಿತ್ತು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.