ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಬಿಸಿಗಾಳಿ ಬೀಸುತ್ತಿದ್ದು, ಈ ವರ್ಷದ ಮಾರ್ಚ್ 1ರಿಂದ ಜೂನ್ 18ರ ನಡುವೆ ಕನಿಷ್ಠ 110 ಜನ ಮೃತಪಟ್ಟಿದ್ದಾರೆ ಮತ್ತು 40,000ಕ್ಕೂ ಹೆಚ್ಚು ಮಂದಿ ಬಿಸಿಗಾಳಿಯಿಂದ ಬಾಧಿತರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ಗುರುವಾರ ತಿಳಿಸಿವೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ಉತ್ತರ ಪ್ರದೇಶವು ಹೆಚ್ಚು ಪೀಡಿತವಾಗಿದ್ದು, 36 ಮಂದಿ ಸಾವಿಗೀಡಾಗಿದ್ದಾರೆ. ನಂತರದ ಸ್ಥಾನದಲ್ಲಿ ಬಿಹಾರ, ರಾಜಸ್ಥಾನ ಮತ್ತು ಒಡಿಶಾದಲ್ಲಿ ಅತಿ ಹೆಚ್ಚು ಸಾವು ವರದಿಯಾಗಿದೆ.
ಇದು ಸದ್ಯದ ಮಾಹಿತಿ. ರಾಜ್ಯಗಳಿಂದ ಅಂತಿಮ ವರದಿ ಸಲ್ಲಿಕೆಯಾಗಿಲ್ಲ. ಹಾಗಾಗಿ ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಉತ್ತರ ಮತ್ತು ಪೂರ್ವ ಭಾರತದ ವಿವಿಧೆಡೆ ಸಾವುನೋವು ಹೆಚ್ಚಿವೆ. ಬಿಸಿಗಾಳಿಯಿಂದ ಬಾಧಿತರಾಗಿ ಆಸ್ಪತ್ರೆ ಸೇರಿರುವವರಿಗೆ ಸೂಕ್ತ ಚಿಕಿತ್ಸೆ ನೀಡಲು ವಿಶೇಷ ಘಟಕಗಳನ್ನು ಸ್ಥಾಪಿಸುವಂತೆ ಆಸ್ಪತ್ರೆಗಳಿಗೆ ಸಲಹೆ ನೀಡಲಾಗಿದೆ.
‘ಬಿಸಿಗಾಳಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವವರಿಗೆ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು’ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಬುಧವಾರ ಎಲ್ಲ ಆಸ್ಪತ್ರೆಗಳಿಗೂ ಸೂಚನೆ ನೀಡಿದ್ದಾರೆ.
ಜನರಿಗೆ ಎಚ್ಚರಿಕೆ:
ಬಿಸಿಗಾಳಿಯಿಂದ ಸ್ವಯಂ ರಕ್ಷಣೆ ಪಡೆಯುವಂತೆ ದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಕ್ಕಳು, ವೃದ್ಧರು ಬಿಸಿಲಿಗೆ ಹೋಗದಂತೆ ಸಲಹೆ ನೀಡಿದೆ. ಇದಲ್ಲದೇ, ಬಿಸಿಗಾಳಿಯ ತೀವ್ರತೆ ಹೆಚ್ಚಿರುವ ಉತ್ತರ ಭಾರತಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವಾಲಯ ಸಲಹಾ ಪತ್ರ ಸಿದ್ಧಪಡಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.