ADVERTISEMENT

ಛತ್ತೀಸ್‌ಗಡದ ಸುರ್ಗುಜಾ ಜಿಲ್ಲೆಯಲ್ಲಿ ಕಂದಕಕ್ಕೆ ಉರುಳಿದ ಬಸ್: 12 ಪೊಲೀಸರಿಗೆ ಗಾಯ

ಪಿಟಿಐ
Published 2 ಅಕ್ಟೋಬರ್ 2021, 11:07 IST
Last Updated 2 ಅಕ್ಟೋಬರ್ 2021, 11:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊರ್ಬಾ: ಛತ್ತೀಸ್‌ಗಡದ ಸುರ್ಗುಜಾ ಜಿಲ್ಲೆಯಲ್ಲಿ ಶನಿವಾರ ಬಸ್ ನಾಲೆಗೆ ಬಿದ್ದ ಪರಿಣಾಮ ಕನಿಷ್ಠ 12 ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಘಾತದ ವೇಳೆ ಬಸ್ಸಿನಲ್ಲಿ ಒಟ್ಟು 38 ಪೊಲೀಸರು ಇದ್ದರು. ಬಸ್ ಸುರ್ಗುಜಾದ ಮೈನ್‌ಪತ್ ಪೊಲೀಸ್ ತರಬೇತಿ ಶಾಲೆಯಿಂದ ಮುಂಗೇಲಿಗೆ ಹೋಗುತ್ತಿತ್ತು. ಈ ಪೊಲೀಸರನ್ನು ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಗೇಲ್ ಅವರು ಭಾನುವಾರ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮುಂಗೇಲಿಯಲ್ಲಿ ನಿಯೋಜಿಸಲಾಗಿತ್ತು.

'ಮೈನ್‌ಪತ್ ಮತ್ತು ಆಮಗಾಂವ್ ಗ್ರಾಮಗಳ ನಡುವೆ ಬೆಳಿಗ್ಗೆ ಅಪಘಾತ ಸಂಭವಿಸಿದೆ. ಕಿರಿದಾದ ರಸ್ತೆ ತಿರುವಿನಲ್ಲಿ ಚಲಿಸುತ್ತಿದ್ದಾಗ ಬಸ್ಸಿನ ಚಾಲಕ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ಇದರಿಂದಾಗಿ ಬಸ್ ಕಂದಕಕ್ಕೆ ಬಿದ್ದಿದೆ. ಈ ವೇಳೆ ಕನಿಷ್ಠ 12 ಪೊಲೀಸರಿಗೆ ಗಾಯವಾಗಿದೆ' ಎಂದು ಸುರ್ಗುಜಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಶುಕ್ಲಾ ಹೇಳಿದರು.

ADVERTISEMENT

ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ ಗಾಯಗೊಂಡ ಎಂಟು ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದ್ದು, ಇತರ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಶುಕ್ಲಾ ತಿಳಿಸಿದ್ದಾರೆ.

ಮುಖ್ಯಮಂತ್ರಿಯವರು ಭಾನುವಾರ ಮುಂಗೇಲಿಯನ್ನು ತಲುಪಲಿದ್ದಾರೆ, ಅವರು ಶನಿವಾರ ಬೆಮೆತಾರಾ ಜಿಲ್ಲೆಯಲ್ಲಿದ್ದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.