ADVERTISEMENT

ಪ್ರತ್ಯೇಕ ಅಪಘಾತ: 16 ವಲಸೆ ಕಾರ್ಮಿಕರ ಸಾವು

ಪಿಟಿಐ
Published 19 ಮೇ 2020, 16:32 IST
Last Updated 19 ಮೇ 2020, 16:32 IST
ಬಿಹಾರದ ಬಾಗಲಪುರ ಸಮೀಪ ರಸ್ತೆಯಿಂದ ಕೆಳಗುರುಳಿದ ಟ್ರಕ್
ಬಿಹಾರದ ಬಾಗಲಪುರ ಸಮೀಪ ರಸ್ತೆಯಿಂದ ಕೆಳಗುರುಳಿದ ಟ್ರಕ್   

ಮುಂಬೈ/ಭಾಗಲ್ಪುರ, ಬಿಹಾರ/ಬಂಡಾ, ಉತ್ತರ ಪ್ರದೇಶ: ಮಹಾರಾಷ್ಡ್ರ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮಂಗಳವಾರ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 16 ವಲಸೆ ಕಾರ್ಮಿಕರು ಸೇರಿ 17 ಜನರು ಮೃತಪಟ್ಟು, 39 ಜನರು ಗಾಯಗೊಂಡಿದ್ದಾರೆ.

ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ 9 ಕಾರ್ಮಿಕರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮಾಹುವಾ ಬಳಿಯ ಅಪಘಾತದಲ್ಲಿ ಮೂವರು ಮೃತಪಟ್ಟು, 17 ಜನರು ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಯವತ್ಮಾಳ್‌ ಜಿಲ್ಲೆಯ ಕೊಲ್ವಾನ್‌ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಕಾರ್ಮಿಕರು ಹಾಗೂ ಬಸ್‌ ಚಾಲಕರೊಬ್ಬರು ಮೃತಪಟ್ಟು, 22 ಜನರು ಗಾಯಗೊಂಡಿದ್ದಾರೆ.

9 ಜನ ವಲಸೆ ಕಾರ್ಮಿಕರು ಟ್ರಕ್‌ವೊಂದರಲ್ಲಿ ಪ್ರಯಾಣಿಸುತ್ತಿದ್ದರು. ಎದುರಿನಿಂದ ಬಂದ ಬಸ್‌‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಟ್ರಕ್‌ ಉರುಳಿ ಬಿದ್ದು, 9 ಜನ ಕಾರ್ಮಿಕರೂ ಮೃತಪಟ್ಟಿದ್ದಾರೆ.ಈ ಅಪಘಾತ ಅಂಭೋ ಚೌಕ್‌ ಸಮೀಪ ರಾಷ್ಟ್ರೀಯ ಹೆದ್ದಾರಿ–31ರಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ ಎಂದುನೌಗಾಛಿಯಾ ಎಸ್ಪಿ ನಿಧಿ ರಾಣಿ ತಿಳಿಸಿದ್ದಾರೆ.

ADVERTISEMENT

ಕರ್ನಾಟಕದಿಂದ ದರ್ಭಾಂಗಕ್ಕೆ ತೆರಳಿದ್ದ 35 ಕಾರ್ಮಿಕರು ಈ ಬಸ್‌ನಲ್ಲಿದ್ದರು. ಬಸ್‌ ಬಂಕಾ ಎಂಬಲ್ಲಿಗೆ ಹೊರಟಿತ್ತು. ಈ ಕಾರ್ಮಿಕರಿಗೂ ಗಾಯಗಳಾಗಿವೆ.

ಆರು ದಿನದ ಹಿಂದೆ ಕೋಲ್ಕತ್ತದಿಂದ ಸೈಕಲ್‌ನಲ್ಲಿ ಬರುತ್ತಿದ್ದ ಈ ನತದೃಷ್ಟ ಕಾರ್ಮಿಕರು, ಮಾರ್ಗ ಮಧ್ಯೆ ಟ್ರಕ್‌ ಮೂಲಕ ತಮ್ಮ ಪ್ರಯಾಣ ಮುಂದುವರಿಸಿದ್ದರು ಎಂದೂ ಅವರು ತಿಳಿಸಿದ್ದಾರೆ. ಈ ಕಾರ್ಮಿಕರು ಪೂರ್ವ ಮತ್ತು ಪಶ್ಚಿಮ ಚಂಪಾರಣ್‌ ಜಿಲ್ಲೆಗೆ ಸೇರಿದವರಾಗಿದ್ದಾರೆ.

ದೆಹಲಿಯಿಂದ ನಡೆದು ಹೋಗುತ್ತಿದ್ದ ಕಾರ್ಮಿಕರು ಉತ್ತರ ಪ್ರದೇಶ–ಮಧ್ಯಪ್ರದೇಶ ಗಡಿಯಲ್ಲಿರುವ ಹರ್ಪಾಲ್‌ಪುರ ಎಂಬಲ್ಲಿ ಟ್ರಕ್‌ ಏರಿದ್ದಾರೆ. ಮಹೋಬಾ ಬಳಿ ಝಾನ್ಸಿ–ಮಿರ್ಜಾಪುರ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಟೈರ್‌ ಸ್ಫೋಟಗೊಂಡು, ಬಸ್‌ ಉರುಳಿ ಬಿದ್ದ ಪರಿಣಾಮ ಕಾರ್ಮಿಕರ ಪೈಕಿ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟು, 17 ಜನರು ಗಾಯಗೊಂಡಿದ್ದಾರೆ ಎಂದು ಮಹೋಬಾ ಎಸ್ಪಿ ಮಣಿಲಾಲ್‌ ಪಾಟಿದಾರ್ ತಿಳಿಸಿದ್ದಾರೆ.

ಮಹಾರಾಷ್ಟ್ರದ ಯವತ್ಮಾಳ್‌ ಜಿಲ್ಲೆಯ ಕೋಲ್ವಾನ್‌ ಗ್ರಾಮದ ಬಳಿ ಕಾರ್ಮಿಕರಿದ್ದ ಬಸ್‌ನ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ, ನಿಂತಿದ್ದ ಲಾರಿಯೊಂದಕ್ಕೆ ಬಸ್‌ ಡಿಕ್ಕಿ ಹೊಡೆದಿದೆ. ಬಸ್‌ ಚಾಲಕ ಹಾಗೂ ಮೂವರು ಕಾರ್ಮಿಕರು ಸಾವನ್ನಪಿದರು. ಗಾಯಗೊಂಡಿದ್ದ 22 ಜನರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ನೂರುಲ್‌ ಹಸನ್‌ ತಿಳಿಸಿದ್ದಾರೆ.

ಈ ನತದೃಷ್ಟ ಬಸ್‌ ಸೊಲ್ಲಾಪುರದಿಂದ ನಾಗಪುರಕ್ಕೆ ಹೊರಟಿತ್ತು. ನಾಗಪುರ ರೈಲು ನಿಲ್ದಾಣದಿಂದ ಶ್ರಮಿಕ ರೈಲಿನ ಮೂಲಕ ಈ ಕಾರ್ಮಿಕರು ತಮ್ಮ ತವರು ರಾಜ್ಯ ಜಾರ್ಖಂಡ್‌ಗೆ ಹೋಗುವವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.