ಇವಿಎಂ ಮತ್ತು ವಿವಿ ಪ್ಯಾಟ್ (ಪ್ರಾತಿನಿಧಿಕ ಚಿತ್ರ)
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಳಸಿದ್ದ ಎಲ್ಲ 1,440 ವಿವಿಪ್ಯಾಟ್‌ಗಳನ್ನು ಪರಿಶೀಲಿಸಲಾಗಿದ್ದು, ಇವಿಎಂಗಳ ಮತ ಎಣಿಕೆಗೆ ಅವು ಸಂಪೂರ್ಣ ತಾಳೆಯಾಗಿವೆ ಎಂದು ಮಹಾರಾಷ್ಟ್ರದ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಕಿರಣ್ ಕುಲಕರ್ಣಿ ತಿಳಿಸಿದ್ದಾರೆ.
ಕೆಲವು ವಿರೋಧ ಪಕ್ಷಗಳು ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದು, ಪುನಃ ಮತಪತ್ರ ವ್ಯವಸ್ಥೆಗೆ ಮರಳುವಂತೆ ಒತ್ತಾಯಿಸುತ್ತಿರುವಾಗ, ಇವಿಎಂಗಳ ವಿಶ್ವಾಸಾರ್ಹತೆಯ ಬಗ್ಗೆ ಭರವಸೆ ನೀಡಿದ ಅವರು, ಅವು ಹ್ಯಾಕಿಂಗ್ ಮಾಡಲು ಯಾವುದೇ ಅವಕಾಶಗಳಿಲ್ಲದ ಸ್ವತಂತ್ರ ಸಾಧನಗಳಾಗಿವೆ ಎಂದು ಪ್ರತಿಪಾದಿಸಿದ್ದಾರೆ.
‘ವಿಧಾನಸಭಾ ಚುನಾವಣೆಯ 288 ಕ್ಷೇತ್ರಗಳಲ್ಲಿ ಬಳಕೆ ಮಾಡಲಾದ 1,440 ವಿವಿಪ್ಯಾಟ್‌ಗಳನ್ನು ಪರಿಶೀಲಿಸಿದ್ದೇವೆ. ವಿವಿಪ್ಯಾಟ್‌ಗಳು ಎಲ್ಲ ಇವಿಎಂಗಳ ಫಲಿತಾಂಶಗಳಿಗೆ ಸಂಪೂರ್ಣ ಹೊಂದಿಕೆಯಾಗಿವೆ. ಇದು ಇವಿಎಂ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲವಾಗಿಸುತ್ತದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕೆಲವು ಇವಿಎಂಗಳು ಶೇ 99ರಷ್ಟು ಬ್ಯಾಟರಿ ಚಾರ್ಜ್ ತೋರಿಸುವ ಮತ್ತು ಸಂಭವನೀಯ ತಿರುಚುವಿಕೆ ಸಾಧ್ಯತೆಯ ಬಗ್ಗೆ ಕೇಳಿದಾಗ, ‘ಇದು ಮೊಬೈಲ್ ಬ್ಯಾಟರಿಯಂತೆ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬ್ಯಾಟರಿ ಬಾಳಿಕೆ ಸಾಮರ್ಥ್ಯ ಐದು ವರ್ಷಗಳ ಅವಧಿಯದ್ದಾಗಿದೆ. ಈ ಯಂತ್ರಗಳು ಯಾವುದೇ ಬಾಹ್ಯ ಸಂಪರ್ಕವಿಲ್ಲದ ಸ್ವತಂತ್ರ ಸಾಧನಗಳು. ಹ್ಯಾಕಿಂಗ್ ಅಥವಾ ತಿರುಚುವಿಕೆ ಅಸಾಧ್ಯ. ಇವಿಎಂಗಳಲ್ಲಿನ ಚಿಪ್ ಒಂದು ಬಾರಿ ಪ್ರೊಗ್ರಾಮೆಬಲ್ ಆಗಿದ್ದು, ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ. ಕಟ್ಟುನಿಟ್ಟಿನ ಭದ್ರತೆ ಮತ್ತು ಆಡಳಿತಾತ್ಮಕ ಶಿಷ್ಟಾಚಾರಗಳು ಯಾವುದೇ ತಿರುಚುವಿಕೆ, ದುರುಪಯೋಗಕ್ಕೆ ಅನುವು ಮಾಡಿಕೊಡುವುದಿಲ್ಲ’ ಎಂದು ಅವರು ಒತ್ತಿಹೇಳಿದರು.
ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಗೆ ಸಂಬಂಧಿಸಿದಂತೆ 659 ಪ್ರಕರಣಗಳು ದಾಖಲಾಗಿದ್ದು, ಅವು ತನಿಖೆ ಹಂತದಲ್ಲಿವೆ. ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ 366 ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ಪೈಕಿ 300 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.