ADVERTISEMENT

ಭಾರತ–ಚೀನಾ ಕಮಾಂಡರ್‌ಗಳ 15 ತಾಸು ಸುದೀರ್ಘ ಚರ್ಚೆ: ಬಿಕ್ಕಟ್ಟು ಪರಿಹಾರ ಜಟಿಲ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 20:00 IST
Last Updated 16 ಜುಲೈ 2020, 20:00 IST
   

ನವದೆಹಲಿ: ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಿಂದ (ಎಲ್‌ಎಸಿ) ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಚಾರದಲ್ಲಿ ಭಾರತ–ಚೀನಾ ಸೇನೆಯ ಹಿರಿಯ ಅಧಿಕಾರಿಗಳ ನಡುವಣ ಒಪ್ಪಿತ ಅಂಶಗಳ ಜಾರಿಗೆ ತೊಡಕು ಎದುರಾದಂತೆ ಕಾಣಿಸುತ್ತಿದೆ. ‘ಸೈನಿಕರ ವಾಪಸಾತಿಯು ಅತ್ಯಂತ ಜಟಿಲ ಪ್ರಕ್ರಿಯೆ. ವಾಪಸಾತಿಯ ಬಗ್ಗೆ ನಿರಂತರ ದೃಢೀಕರಣವೂ ಬೇಕಿದೆ. ಇನ್ನಷ್ಟು ಮಾತುಕತೆಯ ಮೂಲಕ ಇದು ಸಾಧ್ಯವಾಗಬಹುದು’ ಎಂದು ಭಾರತದ ಸೇನೆಯು ಹೇಳಿದೆ.

ಭಾರತ–ಚೀನಾದ ಸೇನೆಯ ಲೆಫ್ಟಿನೆಂಟ್‌ ಜನರಲ್‌ ಮಟ್ಟದಲ್ಲಿ ನಡೆದ 15 ತಾಸುಗಳ ಸುದೀರ್ಘ ಮಾತುಕತೆಯ ಬಳಿಕ ಸೇನೆಯು ಅಧಿಕೃತ ಹೇಳಿಕೆ ನೀಡಿದೆ. ಪಾಂಗಾಂಗ್‌ ಸರೋವರ ಮತ್ತು ದೆಪ್ಸಾಂಗ್‌–ದೌಲತ್‌ ಬೇಗ್‌ ಓಲ್ಡಿ ವಲಯದಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಚಾರಕ್ಕೆ ಈ ಮಾತುಕತೆಯಲ್ಲಿ ಒತ್ತು ನೀಡಲಾಗಿತ್ತು. ಬಿಕ್ಕಟ್ಟು ಶಮನಕ್ಕೆ ಸಂಬಂಧಿಸಿ ಇದು ಹೆಚ್ಚು ಮಹತ್ವದ ಮತ್ತು ಸಂಕೀರ್ಣವಾದ ಚರ್ಚೆಯಾಗಿತ್ತು. ಈ ಹಿಂದೆ ನಡೆದ ಮಾತುಕತೆಯಂತೆ ಗಾಲ್ವನ್‌, ಹಾಟ್‌ಸ್ಪ್ರಿಂಗ್ಸ್‌ ಮತ್ತು ಗೋಗ್ರಾದಿಂದ ಸೈನಿಕರ ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡಿದೆ.

ಪಾಂಗಾಂಗ್‌ ಸರೋವರದ ಉತ್ತರ ದಂಡೆಯ ಪ್ರದೇಶದ ಫಿಂಗರ್‌–8 ಪ‍್ರದೇಶದಲ್ಲಿ ಭಾರತವು ಹಿಂದಿನಿಂದಲೂ ಗಸ್ತು ನಡೆಸುತ್ತಿತ್ತು. ಆದರೆ, ಬಿಕ್ಕಟ್ಟಿನ ಆರಂಭದ ದಿನಗಳಲ್ಲಿ ಚೀನಾ ಸೈನಿಕರು ಭಾರತದ ಸೈನಿಕರನ್ನು ಫಿಂಗರ್‌–4 ಪ್ರದೇಶದಲ್ಲಿ ತಡೆದಿದ್ದರು. ಬಿಕ್ಕಟ್ಟು ಶಮನ ಪ್ರಕ್ರಿಯೆಯ ಮೊದಲ ಹಂತದಲ್ಲಿ, ಫಿಂಗರ್‌–4 ಪ್ರದೇಶದಿಂದ ಚೀನಾವು ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಆದರೆ, ಸ್ವಲ್ಪ ದೂರದ ಪ್ರದೇಶದಲ್ಲಿ ಅವರನ್ನು ನೆಲೆಯಾಗಿಸಿ ಭಾರತದ ಸೈನಿಕರ ಮೇಲೆ ಕಣ್ಣಿಟ್ಟಿತ್ತು.

ADVERTISEMENT

ಚೀನಾವು ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡದ್ದಕ್ಕೆ ಪ್ರತಿಯಾಗಿ ಭಾರತ ಕೂಡ ಫಿಂಗರ್‌–4 ಪ್ರದೇಶದಿಂದ ಯೋಧರನ್ನು ವಾಪಸ್‌ ಕರೆಸಿಕೊಂಡಿದೆ.

ದೆಪ್ಸಾಂಗ್‌ನ ಗಸ್ತು ಪಾಯಿಂಟ್‌ 10, 11, 12 ಮತ್ತು 13ರಲ್ಲಿ ಭಾರತದ ಯೋಧರು ಗಸ್ತು ನಡೆಸುವುದಕ್ಕೆ ಚೀನಾದ ಸೈನಿಕರು ತಡೆ ಒಡ್ಡಿದ್ದಾರೆ. ಭಾರತಕ್ಕೆ ಅತ್ಯಂತ ಮಹತ್ವದ್ದಾದ ದರ್ಬುಕ್‌–ಶೋಕ–ದೌಲತ್‌ಬೇಗ್‌ ಓಲ್ಡಿ ರಸ್ತೆಯು ಈ ಪ್ರದೇಶದಲ್ಲಿಯೇ ಹಾದು ಹೋಗುತ್ತದೆ. ಈ ರಸ್ತೆಯು ದೌಲತ್‌ಬೇಗ್‌ ಓಲ್ಡಿ ಮತ್ತು ಉತ್ತರದ ಉಪವಲಯವನ್ನು ಲೇಹ್‌ಗೆ ಸಂಪರ್ಕಿಸುತ್ತದೆ. ಈ ಪ್ರದೇಶದಲ್ಲಿ ಚೀನಾದ ಕೈಮೇಲಾದರೆ ಭಾರತಕ್ಕೆ ದೊಡ್ಡ ತೊಂದರೆ ಎದುರಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.