ADVERTISEMENT

ಮಹಾರಾಷ್ಟ್ರ: 20 ಮಂತ್ರಿಗಳ ಪೈಕಿ 15 ಮಂದಿ ಮೇಲಿವೆ ಅಪರಾಧ ಪ್ರಕರಣಗಳು- ಎಡಿಆರ್‌

ಪಿಟಿಐ
Published 12 ಆಗಸ್ಟ್ 2022, 7:00 IST
Last Updated 12 ಆಗಸ್ಟ್ 2022, 7:00 IST
ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಿಎಂ ಏಕನಾಥ ಶಿಂದೆ ಹಾಗೂ ಮತ್ತಿತರರು | ಪಿಟಿಐ ಚಿತ್ರ
ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಿಎಂ ಏಕನಾಥ ಶಿಂದೆ ಹಾಗೂ ಮತ್ತಿತರರು | ಪಿಟಿಐ ಚಿತ್ರ   

ನವದೆಹಲಿ: ಮಹಾರಾಷ್ಟ್ರದ ಶೇಕಡ 75ರಷ್ಟು ಸಚಿವರ ಮೇಲೆ ಅಪರಾಧ ಪ್ರಕರಣಗಳು ಇವೆ ಎಂಬುದು ಅವರು ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಿಳಿದುಬಂದಿದೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವರದಿ ಬಿಡುಗಡೆ ಮಾಡಿದೆ.

ಮಹಾರಾಷ್ಟ್ರದಲ್ಲಿ ಆಗಸ್ಟ್‌ 9ರಂದು ಸಚಿವ ಸಂಪುಟ ವಿಸ್ತರಣೆಯಾಗಿತ್ತು. ಮುಖ್ಯಮಂತ್ರಿ ಸೇರಿದಂತೆ 20 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನೂತನವಾಗಿ ಸಂಪುಟ ಸೇರಿರುವ ಎಲ್ಲ ಸಚಿವರು 2019ರ ವಿಧಾನಸಭೆ ಚುನಾವಣೆ ಸಂದರ್ಭ ಸಲ್ಲಿಕೆ ಮಾಡಿದ್ದ ಸ್ವಯಂ ಅಫಿಡವಿಟ್‌ಗಳನ್ನು ಎಡಿಆರ್‌ ಮತ್ತು ಮಹಾರಾಷ್ಟ್ರ ಎಲೆಕ್ಷನ್‌ ವಾಚ್‌ ಪರಿಶೀಲಿಸಿ ವರದಿ ಸಿದ್ಧಪಡಿಸಿವೆ.

ADVERTISEMENT

ಈ ವರದಿ ಪ್ರಕಾರ 15 ಸಚಿವರು ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ಇರುವ ಬಗ್ಗೆ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. 13 ಸಚಿವರು ತಮ್ಮ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿರುವುದಾಗಿ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ. ಈ ಎಲ್ಲ ಸಚಿವರು ಕೋಟ್ಯಧಿಪತಿಗಳಾಗಿದ್ದಾರೆ. ಅವರ ಆಸ್ತಿ ಮೌಲ್ಯವು ಸರಾಸರಿ ₹ 47.45 ಕೋಟಿ ಇದೆ.

'ಮಂತ್ರಿಗಳ ಪೈಕಿ ಅತಿಹೆಚ್ಚು ಆಸ್ತಿಯನ್ನು ಮಲಾಬಾರ್‌ ಹಿಲ್‌ ಕ್ಷೇತ್ರದ ಪ್ರತಿನಿಧಿ ಮಂಗಲ್‌ ಪ್ರಭಾತ್‌ ಲೋಧಾ ಹೊಂದಿದ್ದಾರೆ. ಅವರ ಘೋಷಿತ ಆಸ್ತಿ ಮೌಲ್ಯ ₹ 441.65 ಕೋಟಿ. ಪೈಥಾನ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭುಮರೆ ಸಂದೀಪನ್‌ರಾವ್‌ ಅಸರಾಂ ಅವರು ₹ 2.92 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದು, ಮಂತ್ರಿಗಳ ಪೈಕಿ ಇದು ಅತಿ ಕಡಿಮೆ ಆಸ್ತಿ ಮೌಲ್ಯವಾಗಿದೆ' ಎಂದು ಎಡಿಆರ್‌ ವಿವರಿಸಿದೆ.

8 ಸಚಿವರ ಶೈಕ್ಷಣಿಕ ಅರ್ಹತೆ 10ರಿಂದ 12ನೇ ತರಗತಿಯಾಗಿದೆ. 11 ಸಚಿವರು ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು ಓದಿರುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ಓರ್ವ ಸಚಿವ ಡಿಪ್ಲೋಮಾ ಮಾಡಿದ್ದಾಗಿ ತಿಳಿಸಿದ್ದಾರೆ. ನಾಲ್ವರು ಸಚಿವರು 41-50 ವರ್ಷದವರಾಗಿದ್ದು, ಇನ್ನುಳಿದವರು 51-70 ವರ್ಷದವರಾಗಿದ್ದಾರೆ.

ಸಿಎಂ ಏಕನಾಥ ಶಿಂದೆ ಅವರು ಎರಡು ಸಚಿವಾಲಯಗಳನ್ನು ಹೊಂದಿದ್ದಾರೆ. ಶಿಂದೆ ಅವರು ಮುಖ್ಯಮಂತ್ರಿಯಾಗಿ ಹಾಗೂ ದೇವೇಂದ್ರ ಫಡಣವೀಸ್‌ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಸಿ 41 ದಿನಗಳಾದ ಬಳಿಕ ಸಂಪುಟಕ್ಕೆ ನೂತನ ಸಚಿವರನ್ನು ಸೇರಿಸಿಕೊಂಡಿದ್ದಾರೆ. ಈ ಪೈಕಿ ತಲಾ 9 ಸಚಿವರು ಬಿಜೆಪಿ ಮತ್ತು ಬಂಡಾಯ ಶಿವಸೇನಾ ಗುಂಪಿನವರಾಗಿದ್ದಾರೆ. ಸಚಿವ ಸಂಪುಟದಲ್ಲಿ ಮಹಿಳೆಯರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.