ADVERTISEMENT

ಛತ್ತೀಸಗಢ: ದಂಪತಿ ಸೇರಿದಂತೆ 17 ನಕ್ಸಲರ ಶರಣಾಗತಿ

ಪಿಟಿಐ
Published 13 ಮಾರ್ಚ್ 2025, 16:17 IST
Last Updated 13 ಮಾರ್ಚ್ 2025, 16:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಿಜಾಪುರ (ಛತ್ತೀಸಗಢ): ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ದಂಪತಿ ಸೇರಿದಂತೆ 17 ನಕ್ಸಲರು ಪೊಲೀಸರಿಗೆ ಗುರುವಾರ ಶರಣಾಗಿದ್ದಾರೆ.

ಈ ಪೈಕಿ 9 ನಕ್ಸಲರ ಸುಳಿವು ನೀಡಿದವರಿಗೆ ನಗದು ಬಹುಮಾನವನ್ನು ಘೋಷಿಸಲಾಗಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

26 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ದಿನೇಶ್‌ ಮೋಡಿಯಮ್‌ (36), ಆತನ ಪತ್ನಿ ಜ್ಯೋತಿ ತತಿ ಅಲಿಯಾಸ್‌ ಕಲಾ ಮೋಡಿಯಮ್‌ (32) ಮತ್ತು ದೂಲಾ ಕರಮ್‌ ಶರಣಾದವರಲ್ಲಿ ಪ್ರಮುಖರು.

ADVERTISEMENT

‘ಪೊಳ್ಳು’ ಹಾಗೂ ‘ಅಮಾನವೀಯ’ ನಕ್ಸಲ್‌ ಸಿದ್ಧಾಂತದಿಂದ ಬೇಸತ್ತು, ಶರಣಾಗತಿ ನಿರ್ಧಾರ ಕೈಗೊಂಡಿದ್ದಾಗಿ ನಕ್ಸಲರು ತಿಳಿಸಿದ್ದಾರೆ ಎಂದು ಬಿಜಾಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್‌ ಯಾದವ್‌ ಹೇಳಿದ್ದಾರೆ. ಅಮಾಯಕ ಬುಡಕಟ್ಟು ಜನರ ಶೋಷಣೆಯಿಂದ ಹತಾಶೆಗೊಂಡ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಬುಡಕಟ್ಟು ಸಮುದಾಯಗಳು ವಾಸಿಸುವ ಹಾಡಿಗಳ ಅಭಿವೃದ್ಧಿಗೆಂದು ಜಾರಿಗೆ ತರಲಾದ ‘ನಿಯದ್‌ ನೆಲ್ಲಾನಾರ್‌’ ಯೋಜನೆಯಿಂದಲೂ ಅವರು ಪ್ರಭಾವಿತರಾಗಿದ್ದಾರೆ ಎಂದು ಯಾದವ್‌ ತಿಳಿಸಿದ್ದಾರೆ.

ಶರಣಾದ ನಕ್ಸಲರಿಗೆ ತಲಾ ₹25 ಸಾವಿರ ಸಹಾಯಧನ ಹಾಗೂ ಪುನರ್‌ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಅವರು ಹೇಳಿದ್ದಾರೆ.

ಈ 17 ನಕ್ಸಲರ ಶರಣಾಗತಿ ಮೂಲಕ ಬಿಜಾಪುರ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 65 ನಕ್ಸಲರು ಪೊಲೀಸರಿಗೆ ಶರಣಾದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.