ADVERTISEMENT

ಸಾವಿನ ಗುಂಡಿ:ತೆರೆದ ಕೊಳವೆ ಬಾವಿಗೆ ಬಿದ್ದ 18 ತಿಂಗಳ ಮಗು, ರಕ್ಷಣಾ ಕಾರ್ಯ ಚುರುಕು

ಏಜೆನ್ಸೀಸ್
Published 21 ಮಾರ್ಚ್ 2019, 13:34 IST
Last Updated 21 ಮಾರ್ಚ್ 2019, 13:34 IST
   

ಹಿಸಾರ್‌: ಹದಿನೆಂಟು ತಿಂಗಳ ಮಗುಸುಮಾರು 60 ಅಡಿ ಆಳದ ಕೊಳವೆ ಬಾವಿಯೊಳಗೆ ಬಿದ್ದು ಸಿಲುಕಿರುವ ಘಟನೆ ಗುರುವಾರ ಹರಿಯಾಣದ ಬಾಲಸಮಂದ್ ಗ್ರಾಮದಲ್ಲಿ ನಡೆದಿದೆ. ಮಗುವಿನರಕ್ಷಣೆಗೆ ಕಾರ್ಯಾಚರಣೆ ತೀವ್ರಗೊಳಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಗುವಿಗೆ ಉಸಿರಾಡಲುಸಹಕಾರಿಯಾಗಲುಆಮ್ಲಜನಕದ ಕೊಳವೆಗಳನ್ನು ಬಾವಿಯೊಳಗೆ ಇಳಿ ಬಿಡಲಾಗಿದೆ ಹಾಗೂ ಬಿಸ್ಕತ್‌, ಜ್ಯೂಸ್‌ ಪೊಟ್ಟಣಗಳನ್ನು ಮಗುವಿನ ಸಮೀಪ ಕಳುಹಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಗು ಸುರಕ್ಷಿತವಾಗಿದೆ ಎಂದು ಡಿಸಿಪಿ ಜೋಗಿಂದರ್‌ ಸಿಂಗ್‌ ಹೇಳಿದ್ದಾರೆ.

ADVERTISEMENT

ಮನೆಯ ಹೊರಭಾಗದಲ್ಲಿ ಇತರೆ ಮಕ್ಕಳೊಂದಿಗೆ ಆಟವಾಡುತ್ತಿದ್ದ 18 ತಿಂಗಳ ನದೀಮ್‌, ಆಕಸ್ಮಿಕವಾಗಿ ಕೊಳವೆ ಬಾವಿಯೊಳಗೆ ಬಿದ್ದಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ಸಿಬ್ಬಂದಿ, ಸೇನೆಯಲ್ಲಿನ ತಜ್ಞರು ಹಾಗೂ ಸ್ಥಳೀಯ ಅಧಿಕಾರಿಗಳು ಮಗುವಿನ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮಣ್ಣು ತೆಗೆಯುವ ಯಂತ್ರ ಸೇರಿದಂತೆ ಹಲವು ಸಲಕರಣೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ವೈದ್ಯಕೀಯ ತಂಡವೂಸ್ಥಳದಲ್ಲಿದೆ.

ತಾಂತ್ರಿಕ ತೊಡಕುಗಳೂ ಇರುವುದರಿಂದ ನಿರ್ದಿಷ್ಟ ಸಮಯದಲ್ಲಿಯೇ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ ಎಂಬುದನ್ನು ಹೇಳಲಾಗದು ಎಂದು ಡಿಸಿಪಿ ಪ್ರತಿಕ್ರಿಯಿಸಿದ್ದಾರೆ.

ಅನುಮತಿ ಪಡೆಯದೆಯೇ ಕೊಳವೆ ಬಾವಿ ತೋಡಿರುವವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅಶೋಕ್‌ ಕುಮಾರ್ ಮೀನಾ ಹೇಳಿದ್ದಾರೆ. ತೆರೆದ ಬಾವಿಗಳು ಮಕ್ಕಳ ಪಾಲಿಗೆ ಸಾವಿನ ಗುಂಡಿಗಳಾ‌ಗಿ ಪರಿಣಮಿಸಿರುವುದಕ್ಕೆ ಮತ್ತೊಂದು ಸಾಕ್ಷ್ಯ ದೊರೆತಂತಾಗಿದೆ. ಮಗು ನದೀಮ್‌ ತಂದೆ ಕಾರ್ಮಿಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.