ಚಂಡೀಗಢ: ಕಾಶ್ಮೀರಿ ಪಂಡಿತ ಕುಟುಂಬಗಳು 1991ರಿಂದ 1993ರ ಅವಧಿಯಲ್ಲಿ ಹರಿಯಾಣದ ಜಾಜ್ಜರ್‌ನಲ್ಲಿ ಖರೀದಿಸಿದ್ದ ಜಮೀನಿಗಳಿಗೆ 30 ವರ್ಷಗಳ ಬಳಿಕ ಹಕ್ಕುಪತ್ರ ನೀಡಲಾಗಿದೆ ಎಂದು ಹರಿಯಾಣ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
'ವಚನ್‌ಪೂರ್ತಿ ಯೋಜನೆ'ಯಡಿ 182 ಕುಟುಂಬಗಳಿಗೆ ಜಮೀನಿನ ಹಕ್ಕುಪತ್ರ ನೀಡಲಾಗಿದೆ ಎಂದು ಗುರುವಾರ ನಡೆದ ಕಾರ್ಯಕ್ರಮದಲ್ಲಿ ಘೋಷಿಸಲಾಗಿದೆ.
ಬಹದ್ದೂರ್‌ಗಢದ ಸೆಕ್ಟರ್ 2ರಲ್ಲಿ ಒಟ್ಟು 209 ಕುಟುಂಬಗಳು ಜಮೀನು ಖರೀದಿಸಿದ್ದವು. ಆದರೆ ಇದುವರೆಗೆ ಹಕ್ಕುಪತ್ರ ಸಿಕ್ಕಿರಲಿಲ್ಲ. 182 ಕುಟುಂಬಗಳ ಪೈಕಿ ಆಹ್ವಾನದ ಮೇರೆಗೆ ಆಗಮಿಸಿದ್ದ ಕೆಲವರಿಗೆ ಖುದ್ದಾಗಿ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರು ಹಕ್ಕುಪತ್ರ ವಿತರಿಸಿದ್ದಾರೆ. ವರ್ಚುವಲ್‌ಆಗಿ ಭಾಗವಹಿಸಿದ ಉಳಿದ ಕುಟುಂಬದವರಿಗೆ ಸಚಿವರು ಮತ್ತು ಅಧಿಕಾರಿಗಳು ಹಕ್ಕುಪತ್ರ ವಿತರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
'ಹರಿಯಾಣದ ಇತಿಹಾಸದಲ್ಲಿ ಇದು ಐತಿಹಾಸಿಕ ದಿನವಾಗಿದೆ. 1991-93ರ ಅವಧಿಯಲ್ಲಿ ಜಮೀನು ಖರೀದಿಸಿ ಹಕ್ಕುಪತ್ರಕ್ಕಾಗಿ ಕಾದಿದ್ದವರಿಗೆ ಅಂತಿಮವಾಗಿ ಸುಖಾಂತ್ಯ ಸಿಕ್ಕಿದೆ. ಕಳೆದ 30 ವರ್ಷಗಳಲ್ಲಿ ಹಕ್ಕುಪತ್ರದ ಭರವಸೆಯನ್ನೇ ಕಳೆದುಕೊಂಡಿದ್ದರು. 180 ಕುಟುಂಬಗಳನ್ನು ಹೊರತುಪಡಿಸಿ ಉಳಿದ ಕೆಲವು ಕುಟುಂಬಗಳಿಗೆ ಈ ಹಿಂದೆಯೇ ಜಮೀನು ಹಕ್ಕುಪತ್ರ ಸಿಕ್ಕಿದೆ. ಹಾಗಾಗಿ ಕೊಟ್ಟಿದ್ದ ಭರವಸೆಯನ್ನು ಪೂರ್ಣಗೊಳಿಸಿದಂತಾಗಿದೆ' ಎಂದು ಖಟ್ಟರ್ ಹೇಳಿರುವುದಾಗಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
'ಜೀವ ಭಯದಿಂದ ಕಾಶ್ಮೀರವನ್ನು ತೊರೆದು 1991-92ರಲ್ಲಿ ಬಹದ್ದೂರ್‌ಗಢಕ್ಕೆ ಆಗಮಿಸಿದೆವು. ಬಳಿಕ ಜೀವನಕ್ಕಾಗಿ ಸಣ್ಣ ಜಮೀನನ್ನು ಖರೀದಿಸಿದೆವು. ಅದರ ಹಕ್ಕುಪತ್ರ ಪಡೆಯಲು ಮೂರು ದಶಕಗಳೇ ಕಳೆದವು. ಇದೀಗ ಹಕ್ಕುಪತ್ರ ಸಿಕ್ಕಿದ್ದರಿಂದ ನಮ್ಮ ಸಂತೋಷವನ್ನು ಬಣ್ಣಿಸಲಾಗುತ್ತಿಲ್ಲ. ಮುಖ್ಯಮಂತ್ರಿಗಳಿಗೆ ಹೇಗೆ ಧನ್ಯವಾದ ಹೇಳಬೇಕು ಎಂದು ತಿಳಿಯುತ್ತಿಲ್ಲ' ಎಂದು ಫಲಾನುಭವಿಯೊಬ್ಬರು ಪ್ರತಿಕ್ರಿಯಿಸಿರುವುದಾಗಿ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.