ADVERTISEMENT

ಮೈಕೊರೆವ ಚಳಿ: ದೆಹಲಿಯಲ್ಲಿ ನಿರಾಶ್ರಿತರಿಗೆ 190 ಟೆಂಟ್, ಮೂರೊತ್ತೂ ಊಟದ ವ್ಯವಸ್ಥೆ

ಪಿಟಿಐ
Published 9 ಜನವರಿ 2024, 11:44 IST
Last Updated 9 ಜನವರಿ 2024, 11:44 IST
   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ ಕುಸಿಯುತ್ತಿದ್ದು, ದೆಹಲಿ ನಗರ ವಸತಿ ಸುಧಾರಣಾ ಮಂಡಳಿಯು(ಡಿಯುಎಸ್‌ಐಬಿ) ನಗರದಲ್ಲಿ ನಿರಾಶ್ರಿತರಿಗಾಗಿ 190 ಟೆಂಟ್‌ಗಳ ವ್ಯವಸ್ಥೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಟೆಂಟ್‌ಗಳಲ್ಲಿ 8,000 ಮಂದಿ ಆಶ್ರಯ ಪಡೆಯಬಹುದಾಗಿದ್ದು, 60 ಟೆಂಟ್‌ಗಳನ್ನು ಹೆಚ್ಚುವರಿಯಾಗಿ ಇರಿಸಿಕೊಳ್ಳಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನೂ ಬಳಕೆ ಮಾಡಲಾಗುವುದು ಎಂದು ಮಂಡಳಿಯ ಸದಸ್ಯ ಬಿಪಿನ್ ರಾಯ್ ಹೇಳಿದ್ದಾರೆ.

ಸೋಮವಾರವು ದೆಹಲಿಯಲ್ಲಿ ಈ ತಿಂಗಳ ಅತ್ಯಂತ ಚಳಿಯ ದಿನವಾಗಿದೆ. ಈವರೆಗೆ 5.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. .

ADVERTISEMENT

ಪ್ರತಿ ದಿನ ಚಳಿಯಲ್ಲಿ ತತ್ತರಿಸುತ್ತಿರುವ 200ರಿಂದ 300 ಜನರನ್ನು ನಾವು ರಕ್ಷಿಸುತ್ತಿದ್ದೇವೆ. ಈ ಮೊದಲು ಅವರಿಗೆ ಟೀ ಮತ್ತು ಸ್ನ್ಯಾಕ್ಸ್ ಮಾತ್ರ ನೀಡುತ್ತಿದ್ದೆವು. ಈಗ, ದಿನದ ಮೂರು ಹೊತ್ತೂ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ರಾಯ್ ತಿಳಿಸಿದ್ದಾರೆ.

ಚಳಿಗಾಲದ ಕ್ರಿಯಾ ಯೋಜನೆಯಡಿ ಡಿಸೆಂಬರ್‌ನಿಂದ ನಿರಾಶ್ರಿತರನ್ನು ಟೆಂಟ್‌ಗಳಿಗೆ ಶಿಫ್ಟ್ ಮಾಡುವ ಕೆಲಸವನ್ನು ಡಿಯುಎಸ್‌ಐಬಿ ಮಾಡುತ್ತಿದೆ. ಟೆಂಟ್, ಊಟದ ವ್ಯವಸ್ಥೆ ಬಗ್ಗೆ ನಿರಾಶ್ರಿತರಿಗೆ ಜಾಗೃತಿ ಮೂಡಿಸಲು 15 ತಂಡಗಳನ್ನು ನಿಯೋಜಿಸಲಾಗಿದೆ. ಈ ಟೆಂಟ್‌ಗಳಿಗೆ ವೈದ್ಯರು ಸಹ ಭೇಟಿ ನೀಡುತ್ತಾರೆ.

ಪ್ರತಿ ದಿನ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 4 ಗಂಟೆವರೆಗೆ ಈ ತಂಡಗಳು ನಿರಾಶ್ರಿತರನ್ನು ಹುಡುಕಿ ಟೆಂಟ್‌ಗಳಿಗೆ ಸಾಗಿಸುತ್ತಾರೆ. ಈ ಪ್ರತೀ ತಂಡಕ್ಕೆ ಒಂದು ವಾಹನ, ಇಬ್ಬರು ಸಹಾಯಕರು ಮತ್ತು ಒಬ್ಬ ಚಾಲಕ ಇರುತ್ತಾರೆ.

ಡಿಯುಎಸ್‌ಐಬಿ ಕಂಟ್ರೋಲ್ ರೂಮ್‌ಗೆ ಬರುವ ಮಾಹಿತಿ ಆಧರಿಸಿ ತಂಡಗಳು ಕಾರ್ಯಾಚರಣೆ ನಡೆಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.