ಸಜ್ಜನ್ ಕುಮಾರ್
ಪಿಟಿಐ ಚಿತ್ರ
ನವದೆಹಲಿ: 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಕೊಲೆ ಪ್ರಕರಣದಲ್ಲಿ ಮಾಜಿ ಸಂಸದ, ಕಾಂಗ್ರೆಸ್ಸಿನ ಸಜ್ಜನ್ ಕುಮಾರ್ ಅವರಿಗೆ ದೆಹಲಿಯ ನ್ಯಾಯಾಲಯ ವೊಂದು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
1984ರ ನವೆಂಬರ್ 1ರಂದು ನಡೆದ ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣದೀಪ್ ಸಿಂಗ್ ಅವರ ಹತ್ಯೆ ಪ್ರಕರಣದ ಅಪರಾಧಿ ಸಜ್ಜನ್ ಅವರಿಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಈ ಶಿಕ್ಷೆ ಪ್ರಕಟಿಸಿದರು.
ಸಜ್ಜನ್ ಅವರು ಅಪರಾಧಿ ಎಂದು ನ್ಯಾಯಾಲಯವು ಫೆಬ್ರುವರಿ 12ರಂದು ಘೋಷಿಸಿತ್ತು. ಸಜ್ಜನ್ ಅವರು ಎಸಗಿರುವ ಅಪರಾಧಕ್ಕೆ ಮರಣ ದಂಡನೆ ವಿಧಿಸಲು ಕೂಡ ಅವಕಾಶ ಇತ್ತು. ಜಸ್ವಂತ್ ಅವರ ಪತ್ನಿಯು ಸಜ್ಜನ್ ಅವರಿಗೆ ಮರಣ ದಂಡನೆ ವಿಧಿಸಬೇಕು ಎಂದು ಕೋರಿದ್ದರು.
ಆರಂಭದಲ್ಲಿ ಈ ಪ್ರಕರಣ ತನಿಖೆಯನ್ನು ಪಂಜಾಬಿ ಬಾಗ್ ಪೊಲೀಸರು ನಡೆಸಿದರಾದರೂ, ನಂತರ ವಿಶೇಷ ತಂಡವೊಂದು (ಎಸ್‌ಐಟಿ) ತನಿಖೆ ನಡೆಸಿತು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಮಾರಕ ಆಯುಧಗಳನ್ನು ಹೊಂದಿದ್ದ ಜನರ ಗುಂಪೊಂದು ಭಾರಿ ಪ್ರಮಾಣದಲ್ಲಿ ಲೂಟಿಗೆ, ಸಿಖ್ ಸಮುದಾಯದವರ ಆಸ್ತಿ ನಾಶಕ್ಕೆ ಇಳಿದಿತ್ತು. ಜಸ್ವಂತ್ ಅವರ ಮನೆಯ ಮೇಲೆ ದಾಳಿ ನಡೆಸಿದ ಗುಂಪು, ಅವರನ್ನು ಮತ್ತು ಅವರ ಮಗನನ್ನು ಕೊಂದು ಮನೆಯಲ್ಲಿದ್ದ ವಸ್ತುಗಳನ್ನು ಲೂಟಿ ಮಾಡಿತು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
ಸಜ್ಜನ್ ಅವರು ಈ ಗುಂಪಿನ ನೇತೃತ್ವ ವಹಿಸಿದ್ದರು ಎಂದು ಮೇಲ್ನೋಟಕ್ಕೆ ಹೇಳಲು ಸಾಕಷ್ಟು ಆಧಾರಗಳಿವೆ ಎಂದು ಕೋರ್ಟ್ ಹೇಳಿತ್ತು.
ಗಲಭೆ ನಡೆದ ಸಂದರ್ಭದಲ್ಲಿ ಸಜ್ಜನ್ ಅವರು ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಆಗಿದ್ದರು, ಸಂಸದರೂ ಆಗಿದ್ದರು.
‘ಅನಾರೋಗ್ಯ, ವಯಸ್ಸಿನ ಕಾರಣಕ್ಕೆ ಈ ಶಿಕ್ಷೆ’
ಸಜ್ಜನ್ ಕುಮಾರ್ ಅವರ ವಯಸ್ಸು ಮತ್ತು ಅವರು ಎದುರಿಸುತ್ತಿರುವ ಅನಾರೋಗ್ಯವನ್ನು ಗಮನಿಸಿ ಅವರಿಗೆ ಮರಣ ದಂಡನೆ ವಿಧಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸಜ್ಜನ್ ಎಸಗಿರುವುದು ಪಾಶವೀ ಕೃತ್ಯ, ಅದು ಖಂಡನೀಯ ಎಂಬುದರಲ್ಲಿ ಅನುಮಾನ ಇಲ್ಲ. ಆದರೆ ಅವರಿಗೆ 80 ವರ್ಷ ವಯಸ್ಸಾಗಿರುವುದು ಮತ್ತು ಅವರು ಅನಾರೋಗ್ಯಕ್ಕೆ ಒಳಗಾಗಿರುವುದು ಅವರಿಗೆ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಲು ಕಾರಣ ಎಂದು ನ್ಯಾಯಾಧೀಶೆ ಕಾವೇರಿ ಬವೇಜಾ ಹೇಳಿದ್ದಾರೆ.
‘ಜೈಲು ಅಧಿಕಾರಿಗಳು ನೀಡಿರುವ ವರದಿಯ ಪ್ರಕಾರ ಅಪರಾಧಿಯ ನಡತೆ ತೃಪ್ತಿಕರವಾಗಿರುವುದು, ಅವರು ಕಾಯಿಲೆಗಳಿಗೆ ಒಳಗಾಗಿದ್ದಾರೆ ಎನ್ನಲಾದ ಸಂಗತಿ, ಅವರು ಸುಧಾರಣೆ ತಂದುಕೊಳ್ಳುವ ಸಾಧ್ಯತೆ ಇರುವುದು ನನ್ನ ಅಭಿಪ್ರಾಯದಲ್ಲಿ ಅವರಿಗೆ ಮರಣ ದಂಡನೆ ಬದಲು ಜೀವಾವಧಿ ಶಿಕ್ಷೆ ವಿಧಿಸಲು ಕಾರಣ’ ಎಂದು ಆದೇಶದಲ್ಲಿ ಅವರು ಹೇಳಿದ್ದಾರೆ.
ಜೈಲು ಅಧಿಕಾರಿಗಳು ನೀಡಿದ ವರದಿಯನ್ನು ಉಲ್ಲೇಖಿಸಿರುವ ನ್ಯಾಯಾಧೀಶರು, ಸಜ್ಜನ್ ಅವರಿಗೆ ಆರೋಗ್ಯದ ಸಮಸ್ಯೆಯ ಕಾರಣದಿಂದಾಗಿ ತಮ್ಮ ದೈನಂದಿನ ಕೆಲಸಗಳನ್ನೂ ಸರಿಯಾಗಿ ಮಾಡಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಘಟನಾವಳಿ
1991: ಪ್ರಕರಣದಲ್ಲಿ ಎಫ್‌ಐಆರ್ ದಾಖಲು
1994, ಜುಲೈ 8: ಕ್ರಮ ಕೈಗೊಳ್ಳಲು ಅಗತ್ಯ ಸಾಕ್ಷ್ಯಾಧಾರ ಇಲ್ಲ ಎಂದ ದೆಹಲಿ ನ್ಯಾಯಾಲಯ. ಸಜ್ಜನ್ ವಿರುದ್ಧ ದೋಷಾರೋಪ ಪಟ್ಟಿ ಇಲ್ಲ.
2015, ಫೆಬ್ರುವರಿ 12: ವಿಶೇಷ ತನಿಖಾ ತಂಡ ರಚಿಸಿದ ಸರ್ಕಾರ
2021, ಏಪ್ರಿಲ್ 6: ಸಜ್ಜನ್ ಬಂಧನ, ಮೇ 5ರಂದು ಆರೋಪಪಟ್ಟಿ ಸಲ್ಲಿಕೆ
2021, ಡಿಸೆಂಬರ್ 16: ಸಜ್ಜನ್ ವಿರುದ್ಧ ದೋಷಾರೋಪ ನಿಗದಿ
2025, ಫೆಬ್ರುವರಿ 12: ಸಜ್ಜನ್ ಅಪರಾಧಿ ಎಂದು ಘೋಷಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.