ADVERTISEMENT

ಸಿಖ್‌ ವಿರೋಧಿ ಗಲಭೆ: ಸಜ್ಜನ್‌ಗೆ ಜೀವಾವಧಿ ಸಜೆ

ಪಿಟಿಐ
Published 17 ಡಿಸೆಂಬರ್ 2018, 20:30 IST
Last Updated 17 ಡಿಸೆಂಬರ್ 2018, 20:30 IST

ನವದೆಹಲಿ: ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಸಜ್ಜನ್‌ ಕುಮಾರ್‌ ಅವರಿಗೆ 1984ರ ಸಿಖ್‌ ವಿರೋಧಿ ಗಲಭೆಯ ಪ್ರಕರಣವೊಂದರಲ್ಲಿ ದೆಹಲಿ ಹೈಕೋರ್ಟ್‌ ಸೋಮವಾರ ಜೀವಾವಧಿ ಶಿಕ್ಷೆ (ಸಹಜ ಜೀವನದ ಕೊನೆಯವರೆಗೆ) ವಿಧಿಸಿದೆ. ಸಿಖ್‌ ವಿರೋಧಿ ಗಲಭೆಯು ‘ರಾಜಕೀಯ ಪೋಷಣೆ’ ಹೊಂದಿದ್ದ ಜನರು ‘ಮಾನವೀಯತೆಯ ಮೇಲೆ ಎಸಗಿದ ಕ್ರೌರ್ಯ’ ಎಂದು ಹೈಕೋರ್ಟ್‌ ಹೇಳಿದೆ.

ಅಪರಾಧಿಗಳಿಗೆ ಶಿಕ್ಷೆ ನೀಡಲು ಮೂರು ದಶಕಗಳಿಗೂ ಹೆಚ್ಚು ಕಾಲ ಬೇಕಾಯಿತು ಎಂಬುದನ್ನು ನಿರಾಕರಿಸಲಾಗದು. ನ್ಯಾಯಾಲಯವು ಹಲವು ಸವಾಲುಗಳನ್ನು ಎದುರಿಸಬೇಕಾಗಿ ಬಂತು. ಕೊನೆಗೆ ‘ಸತ್ಯಕ್ಕೆ ಜಯವಾಗುತ್ತದೆ ಮತ್ತು ಸಂತ್ರಸ್ತರಿಗೆ ನ್ಯಾಯ ದೊರೆಯುತ್ತದೆ’ ಎಂಬುದು ಬಹಳ ಮುಖ್ಯ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

73 ವರ್ಷದ ಸಜ್ಜನ್‌ ಕುಮಾರ್ ಮತ್ತು ಇತರ ಐವರು ಆರೋಪಿಗಳು ಡಿಸೆಂಬರ್‌ 31ರೊಳಗೆ ಶರಣಾಗಬೇಕು. ಅಲ್ಲಿತನಕ ದೆಹಲಿಯಿಂದ ಹೊರಗೆ ಹೋಗಬಾರದು ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

ADVERTISEMENT

ಸಜ್ಜನ್‌ ಮತ್ತು ಇತರ ಆರೋಪಿಗಳ ವಿರುದ್ಧದ ವಿಚಾರಣೆ 2010ರಲ್ಲಿ ಆರಂಭವಾಗಿತ್ತು. ಆಗ ಸಜ್ಜನ್‌ ಸಂಸದರಾಗಿದ್ದರು. ಮೂರು ವರ್ಷಗಳ ಬಳಿಕ ವಿಚಾರಣಾ ನ್ಯಾಯಾಲಯವು ಐವರು ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. ಸಜ್ಜನ್‌ ಅವರನ್ನು ಎಲ್ಲ ಆರೋಪಗಳಿಂದ ಖುಲಾಸೆ ಮಾಡಿತ್ತು. ಸಜ್ಜನ್‌ ಅವರನ್ನು ದೋಷಮುಕ್ತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್‌. ಮುರಳೀಧರ್‌ ಮತ್ತು ವಿನೋದ್‌ ಗೋಯಲ್‌ ವಿಚಾರಣೆ ನಡೆಸಿದ್ದರು.

ಉಳಿದ ಅಪರಾಧಿಗಳಾದ ಕಾಂಗ್ರೆಸ್‌ನ ಮಾಜಿ ವಾರ್ಡ್‌ ಸದಸ್ಯ ಬಲವಾನ್‌ ಖೋಕರ್‌, ನೌಕಾಪಡೆಯ ನಿವೃತ್ತ ಕ್ಯಾಪ್ಟನ್‌ ಭಾಗ್‌ಮಲ್‌, ಗಿರ್ಧಾರಿ ಲಾಲ್‌ ಮತ್ತು ಮಾಜಿ ಶಾಸಕರಾದ ಮಹೇಂದರ್‌ ಯಾದವ್‌ ಮತ್ತು ಕಿಶನ್‌ ಖೋಕರ್‌ ಅವರಿಗೆ ವಿಚಾರಣಾ ನ್ಯಾಯಾಲಯವು ನೀಡಿದ್ದ ಶಿಕ್ಷೆಯನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

ಖೋಕರ್‌, ಭಾಗ್‌ಮಲ್‌ ಮತ್ತು ಲಾಲ್‌ ಅವರಿಗೆ ಜೀವಾವಧಿ ಮತ್ತು ಯಾದವ್‌ ಹಾಗೂ ಶಿಶನ್‌ಗೆ ಮೂರು ವರ್ಷ ಸಜೆಯನ್ನು ವಿಚಾರಣಾ ನ್ಯಾಯಾಲಯ ವಿಧಿಸಿತ್ತು. ಈಗ, ಸಿಖ್ಖರ ಮನೆಗಳು ಮತ್ತು ಗುರುದ್ವಾರದ ಧ್ವಂಸ ಹಾಗೂ ಅಪರಾಧ ಒಳಸಂಚಿನಲ್ಲಿಯೂ ಇವರು ತಪ್ಪಿತಸ್ಥರು ಎಂದು ಹೈಕೋರ್ಟ್‌ ತೀರ್ಪು ನೀಡಿದೆ. ಮೂವರ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿಯುವುದರೊಂದಿಗೆ ಇತರ ಇಬ್ಬರ ಮೂರು ವರ್ಷ ಸಜೆಯನ್ನು ಹತ್ತು ವರ್ಷಕ್ಕೆ ಏರಿಸಲಾಗಿದೆ.

ವಿಭಜನೆ ನಂತರದ ಕರಾಳ ದುರಂತ:1947ರಲ್ಲಿ ದೇಶ ವಿಭಜನೆ ಬಳಿಕ ಕ್ರೂರವಾದ ಸಾಮೂಹಿಕ ಹತ್ಯೆಗಳು ನಡೆದಿದ್ದವು. ಅದಾದ ಬಳಿಕ 1984ರ ನವೆಂಬರ್‌ 1ರಿಂದ 4ರವರೆಗೆ 2,733 ಸಿಖ್ಖರ ಅಮಾನವೀಯ ಹತ್ಯೆ ನಡೆಸಲಾಗಿದೆ. ಆ ವರ್ಷ ಅಕ್ಟೋಬರ್‌ 31ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸಿಖ್‌ ಅಂಗರಕ್ಷಕನೇ ಹತ್ಯೆ ಮಾಡಿದ ಬಳಿಕ ಈ ಮಾರಣಹೋಮ ನಡೆದಿತ್ತು.

‘ಸಿಖ್ಖರ ಮನೆಗಳನ್ನು ನಾಶ ಮಾಡಲಾಯಿತು. ದೇಶದ ವಿವಿಧ ಭಾಗಗಳಲ್ಲಿ ಸಾವಿರಾರು ಸಿಖ್ಖರ ಮಾರಣಹೋಮ ನಡೆಯಿತು. ಈ ಕೃತ್ಯ ಎಸಗಿದವರಿಗೆ ಅಧಿಕಾರದಲ್ಲಿದ್ದವರ ರಾಜಕೀಯ ಬೆಂಬಲ ಇತ್ತು. ತಟಸ್ಥವಾಗಿದ್ದ ಕಾನೂನು ಜಾರಿ ಸಂಸ್ಥೆಗಳೂ ಅವರಿಗೆ ನೆರವಾದವು’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಕೆಲವು ಆರೋಪಿಗಳ ಭಾಗೀದಾರಿಕೆಯನ್ನು ಸಿಬಿಐ ತನಿಖೆಗೆ ಒಳಪಡಿಸುವುದಕ್ಕೆ ಮೊದಲು ಹತ್ತು ಸಮಿತಿಗಳು ಮತ್ತು ಆಯೋಗಗಳನ್ನು ರಚಿಸಲಾಗಿತ್ತು. ಮಾರಣಹೋಮ ನಡೆದು 21 ವರ್ಷಗಳ ಬಳಿಕ ಅಂದರೆ 2005ರಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಯಿತು.ಸಿಬಿಐ ತನಿಖೆ ಆರಂಭಗೊಂಡ ಬಳಿಕವಷ್ಟೇ ಸಾಕ್ಷಿಗಳಲ್ಲಿ ವಿಶ್ವಾಸ ತುಂಬುವುದು ಸಾಧ್ಯವಾಯಿತು. ಅವರು ಸಾಕ್ಷ್ಯ ನುಡಿಯಲು ಮುಂದಾದರು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಪ್ರಕರಣ ಯಾವುದು?

ನೈರುತ್ಯ ದೆಹಲಿಯ ಪಾಲಂ ಕಾಲನಿಯ ರಾಜ್‌ನಗರ ಭಾಗ–1ರಲ್ಲಿ ಐವರು ಸಿಖ್ಖರನ್ನು 1984ರ ನವೆಂಬರ್‌ 1ರ ರಾತ್ರಿ ಹತ್ಯೆ ಮಾಡಲಾಗಿತ್ತು. ರಾಜ್‌ನಗರ ಭಾಗ–2ರಲ್ಲಿದ್ದ ಗುರುದ್ವಾರಕ್ಕೆ ಬೆಂಕಿ ಹಚ್ಚಲಾಗಿತ್ತು.

ಅಪರಾಧ ಏನು?

* ಹತ್ಯೆಗೆ ಸಂಚು ಮತ್ತು ಕುಮ್ಮಕ್ಕು

* ಧರ್ಮದ ಹೆಸರಿನಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷ ಹರಡುವ ಯತ್ನ

* ಕೋಮು ಸಾಮರಸ್ಯ ಹಾಳು ಮಾಡುವ ಕೃತ್ಯ

* ಗುರುದ್ವಾರ ಅಪವಿತ್ರಗೊಳಿಸಿರುವುದು ಮತ್ತು ಸುಟ್ಟು ಹಾಕಿರುವುದು

ಸಾಕ್ಷಿಗಳಿಗೆ ಶ್ಲಾಘನೆ

ಮೂವರು ಪ್ರತ್ಯಕ್ಷದರ್ಶಿ ಸಾಕ್ಷಿಗಳಾದ ಜಗದೀಶ್‌ ಕೌರ್‌, ಅವರ ಸೋದರ ಸಂಬಂಧಿ ಜಗಶೇರ್‌ ಕೌರ್‌ ಮತ್ತು ನಿರ್‌ಪ್ರೀತ್‌ ಕೌರ್‌ ಅವರ ದಿಟ್ಟತನ ಮತ್ತು ಗಟ್ಟಿ ನಿಲುವೇ ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಕಾರಣವಾಯಿತು ಎಂದು ನ್ಯಾಯಪೀಠವು ಶ್ಲಾಘಿಸಿದೆ.

ಜಗದೀಶ್‌ ಕೌರ್‌ ಅವರ ಗಂಡ ಕೇಹರ್‌ ಸಿಂಗ್‌, ಮಗ ಗುರ್‌ಪ್ರೀತ್‌ ಸಿಂಗ್‌, ಸಂಬಂಧಿಗಳಾದ ರಘುವೇಂದರ್‌ ಸಿಂಗ್‌, ನರೇಂದರ್‌ ಪಾಲ್‌ ಸಿಂಗ್‌ ಮತ್ತು ಕುಲದೀಪ್‌ ಸಿಂಗ್‌ ಅವರನ್ನು ಹತ್ಯೆ ಮಾಡಲಾಗಿತ್ತು. ಜಗದೀಶ್‌ ಕೌರ್‌ ಮತ್ತು ಜಗ್‌ಶೇರ್‌ ಸಿಂಗ್‌ ಅವರ ಕಣ್ಣೆದುರಲ್ಲೇ ಈ ಹತ್ಯೆ ನಡೆದಿತ್ತು. ನಿರ್‌ಪ್ರೀತ್‌ ಕೌರ್‌ ಅವರ ಕಣ್ಣ ಮುಂದೆಯೇ ಗುರುದ್ವಾರವನ್ನು ಸುಟ್ಟು ಹಾಕಲಾಗಿತ್ತು ಮತ್ತು ಅವರ ತಂದೆಯನ್ನು ಸಜೀವ ದಹನ ಮಾಡಲಾಗಿತ್ತು.

ಸಿಖ್‌ ವಿರೋಧಿ ಗಲಭೆಯು ಮಾನವೀಯತೆಯ ಮೇಲೆ ನಡೆದ ಕೌರ್ಯ. ಇದು ಸಮಾಜದ ಸಾಮೂಹಿಕ ಆತ್ಮಸಾಕ್ಷಿಯನ್ನು ಇನ್ನೂ ಬಹುಕಾಲ ಚುಚ್ಚುತ್ತಲೇ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.