ADVERTISEMENT

ಅದಲು ಬದಲಾದ ಶವಗಳು: ಮುಸ್ಲಿಂ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿದ ಹಿಂದೂ ಕುಟುಂಬ

ಏಜೆನ್ಸೀಸ್
Published 9 ಜುಲೈ 2020, 4:44 IST
Last Updated 9 ಜುಲೈ 2020, 4:44 IST
   

ನವದೆಹಲಿ: ದೇಶದ ಪ್ರಮುಖ ವೈದ್ಯಕೀಯ ಸಂಸ್ಥೆಯಾದ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯ (ಏಮ್ಸ್‌) ಸಿಬ್ಬಂದಿ ಗೊಂದಲ ಮಾಡಿಕೊಂಡಿದ್ದರಿಂದಕೋವಿಡ್‌–19 ಸೋಂಕಿತರ ಶವಗಳು ಅದಲು ಬದಲಾದ ಪ್ರಕರಣ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

ಗಾಜಿಯಾಬಾದ್‌ನ ಕೈಲಾಶ್‌ನಗರ ನಿವಾಸಿ ಕುಸುಮಲತಾ (52) ಎಂಬುವವರು ಅನಾರೋಗ್ಯದಿಂದಾಗಿ ದೆಹಲಿಯ ಏಮ್ಸ್‌ಗೆ ಕಳೆದ ವಾರ ದಾಖಲಾಗಿದ್ದರು. ಅವರುಭಾನುವಾರ ಸಂಜೆ ಮೃತಪಟ್ಟಿದ್ದರು. ಕುಸುಮಲತಾ ಅವರದ್ದು ಎನ್ನಲಾದ ಮೃತದೇಹವನ್ನು ಸೋಮವಾರ ಬೆಳಿಗ್ಗೆ ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು.

ಮಹಿಳೆಗೆ ಕೋವಿಡ್–19 ತಗುಲಿತ್ತು ಎಂಬುದು ಮಾದರಿ ಪರೀಕ್ಷೆಬಳಿಕ ದೃಢವಾಗಿತ್ತು. ಆದಾಗ್ಯೂಸಂಬಂಧಿಕರು ಪಂಜಾಬಿ ಬಾಗ್‌ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದ್ದರು.

ADVERTISEMENT

ಆದರೆ, ಕುಸುಮಲತಾ ಅವರ ಕುಟುಂಬದವರಿಗೆ ಮಂಗಳವಾರ ಸಂಜೆ ಕರೆ ಮಾಡಿದ ಏಮ್ಸ್‌ ಸಿಬ್ಬಂದಿ, ಬೇರೊಬ್ಬರ ಶವ ನೀಡಿದ್ದ ವಿಚಾರ ತಿಳಿಸಿದ್ದರು. ಮತ್ತೊಮ್ಮೆ ಆಸ್ಪತ್ರೆಗೆ ಬಂದ ಕುಟುಂಬದ ಸದಸ್ಯರು ಶವ ಪಡೆದು ಅಂತ್ಯಕ್ರಿಯೆ ನೆರವೇರಿಸಿದರು.

ಈ ಮೊದಲು ಕುಸುಮಲತಾ ಬದಲಾಗಿ ಬರೇಲಿ ನಿವಾಸಿ ಅಂಜುಮ್‌ ಅವರ ಶವವನ್ನು ಹಸ್ತಾಂತರಿಸಲಾಗಿತ್ತು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಅಂಜುಮ್‌ ಅವರು ಜುಲೈ 4 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೋವಿಡ್–19 ದೃಢವಾಗಿತ್ತು. ಚಿಕಿತ್ಸೆ ನೀಡಲಾಗಿತ್ತಾದರೂ ಜುಲೈ 6ರಂದು ಬೆಳಿಗ್ಗೆ 11ಗಂಟೆ ವೇಳೆಗೆ ಮೃತಪಟ್ಟಿದ್ದರು. ಅದೇ ದಿನ ಮಧ್ಯಾಹ್ನ 2 ಗಂಟೆ ವೇಳೆಗೆಕುಟುಂಬದವರಿಗೆ ಮಾಹಿತಿ ನೀಡಲಾಗಿತ್ತು. ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಆದರೆ, ಆ ಕುಟುಂದವರಿಗೆಅಂಜುಮ್‌ ಬದಲು ಬೇರೊಂದು ಶವವನ್ನು ನೀಡಲಾಗಿತ್ತು. ಇದನ್ನು ಗಮನಿಸಿದ ಕುಟುಂಬದವರು ಕೂಡಲೇ ಏಮ್ಸ್‌ ಸಿಬ್ಬಂದಿಗೆ ಮಾಹಿತಿ ನೀಡಿದರು.

ಪ್ರಕರಣ ಸಂಬಂಧ ಏಮ್ಸ್‌ ಆಡಳಿತವು ಶವಾಗಾರದ ಇಬ್ಬರು ನೌಕರರನ್ನು ಅಮಾನತು ಮಾಡಿದೆ. ನಿರ್ಲಕ್ಷದ ಕುರಿತು ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದೆ.ಈ ಬಗ್ಗೆ ದೆಹಲಿ ಪೊಲೀಸರಿಗೆ ದೂರು ನೀಡಲಾಗಿದೆಯಾದರೂ ಇನ್ನೂ ಎಫ್‌ಐಆರ್‌ ದಾಖಲಾಗಿಲ್ಲ.

ಈ ವೇಳೆ ಏಮ್ಸ್‌ಗೆ ಭೇಟಿ ನೀಡಿದಆಮ್‌ ಆದ್ಮಿ ಪಕ್ಷದ (ಎಎಪಿ) ಶಾಸಕ ಸೋಮನಾಥ ಭಾರ್ತಿ ಅವರೊಂದಿಗೆ ಮಾತನಾಡಿದ ಮೃತ ಮಹಿಳೆಯರ ಕುಟುಂಬದವರು, ಆಸ್ಪ‌ತ್ರೆಯನಿರ್ಲಕ್ಷದ ಬಗ್ಗೆ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.