ADVERTISEMENT

ಇಬ್ಬರು ಅಪಹೃತ ಒಎನ್‌ಜಿಸಿ ನೌಕರರ ರಕ್ಷಣೆ, ಮತ್ತೊಬ್ಬರಿಗಾಗಿ ಶೋಧ

ಅಸ್ಸಾಂ ಪೊಲೀಸ್, ಸೇನೆ ಮತ್ತು ಅರೆ ಸೇನಾಪಡೆಗಳ ಜಂಟಿ ಕಾರ್ಯಾಚರಣೆ

ಪಿಟಿಐ
Published 24 ಏಪ್ರಿಲ್ 2021, 10:29 IST
Last Updated 24 ಏಪ್ರಿಲ್ 2021, 10:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುವಾಹಟಿ: ನಾಗಾಲ್ಯಾಂಡ್‌ನ ಭಾರತ-ಮ್ಯಾನ್ಮಾರ್ ಗಡಿ ಬಳಿ ಅಸ್ಸಾಂ ಪೊಲೀಸ್‌, ಸೇನೆ ಮತ್ತು ಅರೆ ಸೇನಾ ಪಡೆಗಳು ಶನಿವಾರ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿಅಪಹೃತರಾಗಿದ್ದ ಇಬ್ಬರು ಒಎನ್‌ಜಿಸಿಯ ನೌಕರರನ್ನು ರಕ್ಷಿಸಲಾಗಿದ್ದು, ಮೂರನೇ ಸಿಬ್ಬಂದಿಗಾಗಿ ಶೋಧ ಮುಂದುವರಿದಿದೆ.

‘ಅಂತರರಾಷ್ಟ್ರೀಯ ಗಡಿಯ ಸಮೀಪ ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಈ ಜಂಟಿ ಕಾರ್ಯಾಚರಣೆ ನಡೆಸಿದೆ‘ ಎಂದುಅಸ್ಸಾಂ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಜ್ಯೋತಿ ಮಹಂತಾ ತಿಳಿಸಿದ್ದಾರೆ.

‘ಭದ್ರತಾ ಪಡೆಗಳು ಮೋಹಿನಿ ಮೋಹನ್ ಗೊಗೊಯ್ ಮತ್ತು ಅಲಕೇಶ್ ಸೈಕಿಯಾ ಅವರನ್ನು ರಕ್ಷಿಸಿವೆ. ರಿತುಲ್ ಸೈಕಿಯಾ ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ‘ ಎಂದು ಹೇಳಿದ್ದಾರೆ.

ADVERTISEMENT

ಈ ಮೂವರು ನೌಕರರನ್ನು ಬುಧವಾರ ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿರುವ ಶಿವಸಾಗರ ಜಿಲ್ಲೆಯ ಲಕ್ವಾ ತೈಲಕ್ಷೇತ್ರದಿಂದ ಶಂಕಿತ ಉಲ್ಫಾ ಉಗ್ರರು ಅಪಹರಿಸಿದ್ದರು.

‘ಉಲ್ಫಾ ಉಗ್ರರೇ ನೌಕರರನ್ನು ಅಪಹರಿಸಿದ್ದಾರೆಂದು ಸ್ಪಷ್ಟವಾಗಿದೆ. ಎನ್‌ಕೌಂಟರ್‌ ಸ್ಥಳದಿಂದ ಪರಾರಿಯಾಗುವಾಗ ಒಎನ್‌ಜಿಸಿಯ ಮತ್ತೊಬ್ಬ ಸಿಂಬ್ಬಂದಿ ರಿತುಲ್ ಸೈಕಿಯಾ ಅವರನ್ನು ಉಗ್ರರು ಕರೆದೊಯ್ದಿದ್ದಾರೆ. ಎನ್‌ಕೌಂಟರ್‌ ನಡೆದ ಸ್ಥಳದಿಂದ ಆರೇಳು ಕಿ.ಮೀ ದೂರದಲ್ಲಿ ಅಂತರರಾಷ್ಟ್ರೀಯ ಗಡಿ ಇದೆ. ಸುತ್ತಲೂ ದಟ್ಟ ಅರಣ್ಯವಿದೆ. ಉಗ್ರರು ಇಲ್ಲಿಂದ ಅಷ್ಟು ಸುಲಭವಾಗಿ ಪಾರಾಗಲು ಸಾಧ್ಯವಿಲ್ಲ‘ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.