ADVERTISEMENT

ಅಪ್ಪನ ಸಮವಸ್ತ್ರ ಧರಿಸಿ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದ ಹುತಾತ್ಮ ಯೋಧನ ಮಗ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 13:34 IST
Last Updated 17 ಫೆಬ್ರುವರಿ 2019, 13:34 IST
   

ಅರಿಯಲೂರ್ (ತಮಿಳುನಾಡು): ಪುಲ್ವಾಮಭಯೋತ್ಪಾದನಾದಾಳಿಯಲ್ಲಿ ಹುತಾತ್ಮನಾದ ಸಿ.ಶಿವಚಂದ್ರನ್ ಅಂತ್ಯ ಸಂಸ್ಕಾರಕ್ಕೆ ಸಿದ್ದತೆಗಳು ನಡೆಯುತ್ತಿದ್ದವು.ಅಲ್ಲಿ ಶಿವಚಂದ್ರನ್ ಅವರ ಎರಡು ವರ್ಷದ ಮಗ ಶಿವಮುನಿಯನ್ ಏನೆಂದು ಅರಿಯದೆ ಎಲ್ಲರನ್ನೂ ನೋಡುತ್ತಿದ್ದ.ಅಪ್ಪನ ಸಮವಸ್ತ್ರ ಧರಿಸಿದ್ದ ಆ ಮಗುವನ್ನು ತಬ್ಬಿಕೊಂಡು ಶಿವಚಂದ್ರನ್ ಪತ್ನಿ ಗಂಧಿಮತಿ ರೋದಿಸುತ್ತಿದ್ದರು.

ತ್ರಿವರ್ಣ ಪತಾಕೆಯಲ್ಲಿ ಸುತ್ತಿದ್ದ ಮೃತದೇಹಕ್ಕೆ ತಾನು ಯಾಕೆ ಸಲ್ಯೂಟ್ ಮಾಡುತ್ತಿದ್ದೇನೆ ಎಂಬುದು ಆ ಮಗುವಿಗೆ ಗೊತ್ತಿರಲಿಲ್ಲ.
ವಾರದ ಹಿಂದೆಯಷ್ಟೇ ಶಿವಚಂದ್ರನ್ ಜಮ್ಮು ಕಾಶ್ಮೀರಕ್ಕೆ ಕರ್ತವ್ಯ ನಿರ್ವಹಿಸಲು ಹೋಗಿದ್ದರು. ಇತ್ತೀಚೆಗಷ್ಟೇ ರಜೆಯಲ್ಲಿ ಬಂದಿದ್ದ ಶಿವಚಂದ್ರನ್ ಶಬರಿಮಲೆಗೂ ಹೋಗಿ ಬಂದಿದ್ದರು.

ಗರ್ಭಿಣಿಯಾಗಿರುವಗಂಧಿಮತಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಎರಡು ವರ್ಷಗಳ ಹಿಂದೆ ತನ್ನ ಕಿರಿಯ ಮಗನನ್ನು ಕಳೆದುಕೊಂಡಿರುವ ಚಿನ್ನಯ್ಯನ್‍ಗೆ ಶಿವಚಂದ್ರನ್‍ನ ಅಗಲಿಕೆ ಆಘಾತವನ್ನುಂಟು ಮಾಡಿದೆ.ಮಗನ ಹಳೆ ಸಮವಸ್ತ್ರವನ್ನು ಧರಿಸಿ ಆ ಅಪ್ಪ ತನ್ನ ಮಗ ಯಾವ ರೀತಿ ಆಧಾರವಾಗಿದ್ದ ಎಂಬುದನ್ನು ಸ್ಮರಿಸಿ ಕಣ್ಣೀರಾಗುತ್ತಾರೆ.

ADVERTISEMENT

ಶಿವಚಂದ್ರನ್‍ನ ಸಹೋದರಿ ಜಯತೀರ್ಥಳಿಗೆ ಮಾತು ಬರುವುದಿಲ್ಲ. ಆಕೆಯ ಸಂಪೂರ್ಣ ಜವಾಬ್ದಾರಿ ಶಿವಚಂದ್ರನ್‍ನದ್ದಾಗಿತ್ತು. ಇದೀಗ ಆಕೆಯ ಬದುಕೂ ಕತ್ತಲಲ್ಲಿದೆ ಅಂತಾರೆ ಸಂಬಂಧಿಕರು.

ಸ್ನಾತಕೋತ್ತರ ಪದವಿ ಮತ್ತು ಬಿಇಡಿ ಪದವಿ ಹೊಂದಿದ್ದ ಶಿವಚಂದ್ರನ್ ಅಲ್ಲಿನ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.ಕಡು ಬಡತನವಿದ್ದ ಕುಟುಂಬಕ್ಕೆ ಅವರೊಬ್ಬರೇ ಆಧಾರವಾಗಿದ್ದರು. 2010ರಲ್ಲಿ ಸಿಆರ್‌ಪಿಎಫ್‍ಗೆ ಸೇರಿದ ನಂತರ ಅವರ ಕುಟುಂಬದ ಪರಿಸ್ಥಿತಿ ಸುಧಾರಿಸಿಕೊಂಡಿತ್ತು.

ಕಿರಿ ಮಗ ಸತ್ತ ನಂತರ ನನಗುಳಿದಿರುವುದು ಒಬ್ಬನೇ ಮಗ.ಕಳೆದ ತಿಂಗಳುಊರಿಗೆ ಬಂದಾಗ ವಾಪಸ್ ಹೋಗಬೇಡ ಎಂದು ನಾನು ಅತ್ತು ಕರೆದಿದ್ದೆ. ಅದಕ್ಕೆ ಅವನು ನೀವು ನನಗೆ ಜನ್ಮ ನೀಡಿರಬಹುದು.ಆದರೆ ನನ್ನ ಜೀವನ ಈ ದೇಶಕ್ಕಾಗಿ ಮೀಸಲಿಟ್ಟಿದ್ದೇನೆ. ನಾನು ಸಾಯವುದಾದರೆ ಯೋಧನಾಗಿಯೇ ಸಾಯುವೆ ಎಂದು ಹೇಳಿದ್ದ ಎಂದು ಶಿವಚಂದ್ರನ್ ತಾಯಿ ಕಣ್ಣೀರು ಹಾಕಿದ್ದಾರೆ.

ಶಿವಚಂದ್ರನ್ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ಮತ್ತು ₹20 ಲಕ್ಷ ಪರಿಹಾರ ಧನವನ್ನು ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.