ADVERTISEMENT

ಸೇನಾಡಳಿತದಿಂದ ದೌರ್ಜನ್ಯ: ಭಾರತದ ಗಡಿ ದಾಟಿ ಬಂದ ಮ್ಯಾನ್ಮಾರ್‌ ಪೊಲೀಸರು

ಕುಟುಂಬ ಸದಸ್ಯರೊಂದಿಗೆ ವಲಸೆ : ಸೇನಾಡಳಿತ ವಿರುದ್ಧ ದೌರ್ಜನ್ಯ ಆರೋಪ

ಏಜೆನ್ಸೀಸ್
Published 13 ಮಾರ್ಚ್ 2021, 12:01 IST
Last Updated 13 ಮಾರ್ಚ್ 2021, 12:01 IST
ಮ್ಯಾನ್ಮಾರ್‌ನ ಯಾಂಗೊನ್‌ನಲ್ಲಿ ಮಿಲಿಟರಿ ಸರ್ಕಾರದ ವಿರುದ್ಧದ ಪ್ರತಿಭಟನಾಕಾರರ ಹುಡುಕಾಟದಲ್ಲಿ ನಿರತರಾಗಿರುವ ಪೊಲೀಸರು. (ರಾಯಿಟರ್ಸ್‌ ಚಿತ್ರ)
ಮ್ಯಾನ್ಮಾರ್‌ನ ಯಾಂಗೊನ್‌ನಲ್ಲಿ ಮಿಲಿಟರಿ ಸರ್ಕಾರದ ವಿರುದ್ಧದ ಪ್ರತಿಭಟನಾಕಾರರ ಹುಡುಕಾಟದಲ್ಲಿ ನಿರತರಾಗಿರುವ ಪೊಲೀಸರು. (ರಾಯಿಟರ್ಸ್‌ ಚಿತ್ರ)    

ಜೋಖ್‌ವಥರ್: ಮ್ಯಾನ್ಮಾರ್‌ನ ನೂರಾರು ಪೊಲೀಸರು ಮತ್ತು ಅವರ ಕುಟುಂಬದ ಸದಸ್ಯರು ಈಗ ಗಡಿದಾಟಿ ಭಾರತಕ್ಕೆ ವಲಸೆ ಬಂದಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಹೀಗೆ ವಲಸೆ ಬಂದಿರುವ ಅಧಿಕಾರಿಯೊಬ್ಬರು, ‘ಮ್ಯಾನ್ಮಾರ್‌ನಲ್ಲಿ ಸೇನಾಡಳಿತ ಪ್ರತಿಭಟನಕಾರರ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಹಲ್ಲೆ ಮಾಡುತ್ತಿದೆ’ ಎಂದು ದೂರಿದ್ದಾರೆ.

ಮ್ಯಾನ್ಮಾರ್‌ನಲ್ಲಿನ ಫೆ.1ರ ಸೇನಾದಂಗೆ ವಿರುದ್ಧ ಜನರು ತೀವ್ರವಾಗಿ ಪ್ರತಿಭಟಿಸುತ್ತಿದ್ದಾರೆ. ಇದನ್ನು ಹತ್ತಿಕ್ಕಲು ಸೇನಾಡಳಿತವು ಯತ್ನಿಸುತ್ತಿದೆ. ವಿಶ್ವಸಂಸ್ಥೆ ಉನ್ನತ ಅಧಿಕಾರಿಗಳ ಪ್ರಕಾರ, ಈವರೆಗೆ ಸುಮಾರು 70 ಪ್ರತಿಭಟನಕಾರರು ಹತರಾಗಿದ್ದಾರೆ.

ಪ್ರತಿಭಟನೆಯನ್ನು ಹತ್ತಿಕ್ಕುವ ಕಾರ್ಯದಲ್ಲಿ ಭಾಗಿಯಾಗಲು ಪೊಲೀಸರು ಸೇರಿದಂತೆ ಹಲವರು ನಿರಾಕರಿಸುತ್ತಿದ್ದಾರೆ. ಈ ಪೈಕಿ ಹಲವರು ಉತ್ತರ ಭಾರತದ ಮಿಜೋರಾಂ ಸೇರಿದಂತೆ ವಿವಿಧ ರಾಜ್ಯಗಳತ್ತ ವಲಸೆ ಮಾಡಿದ್ದಾರೆ.

ADVERTISEMENT

ಶುಕ್ರವಾರದವರೆಗಿನ ಮಾಹಿತಿಯಂತೆ ಸುಮಾರು 264 ಮಂದಿ ವಲಸೆ ಬಂದಿದ್ದು, ಈ ಪೈಕಿ 198 ಮಂದಿ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ಸೇರಿದ್ದಾರೆ ಎಂದು ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಮ್ಯಾನ್ಮಾರ್‌ನಿಂದ ಭಾರತಕ್ಕೆ ಬರಲು ಮುಖ್ಯ ಕಾರಣವೆಂದರೆ ಸೇನಾಡಳಿತದಡಿ ಕೆಲಸ ಮಾಡಲು ಬಯಸುವುದಿಲ್ಲ ಎಂಬುದೇ ಆಗಿದೆ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.

ಮಿಲಿಟರಿ ಆಡಳಿತದಡಿ ಸೇವೆಗೆ ರಾಜೀನಾಮೆ ನೀಡಿ ಜನತೆಯೊಂದಿಗೆ ಕೈಜೋಡಿಸಿ ಹೋರಾಟಕ್ಕೆ ಇಳಿದರೆ ಸೇನಾಡಳಿತ ಕೊನೆಗಾಣಿಸಬಹುದು ಎಂಬುದು ಮತ್ತೊಂದು ಕಾರಣ ಎಂದು ತಿಳಿಸಿದರು.

‘ಪ್ರತಿಭಟನೆಯಲ್ಲಿ ಭಾಗಿಯಾಗದವರು, ರಸ್ತೆ ಬಂದಿ ನಿಂತಿದ್ದವರು ಸೇರಿದಂತೆ ಬಹುತೇಕ ಎಲ್ಲರನ್ನು ಪೊಲೀಸರು ಬಂಧಿಸುವುದನ್ನು ನಾನು ಗಮನಿಸಿದ್ದೇನೆ’ ಎಂದರು.

ಗಡಿದಾಟಿ ಭಾರತಕ್ಕೆ ಬಂದವರಲ್ಲಿ ಸುಮಾರು ಎಂಟು ಜನರನ್ನು ಮರಳಿ ವಾಪಸು ಕಳುಹಿಸಲಾಗಿದೆ. ಗಡಿದಾಟಲು ಸುಮಾರು 12ಕ್ಕೂ ಅಧಿಕ ಜನರು ಕಾಯುತ್ತಿದ್ದಾರೆ ಎಂದು ಗಡಿ ಭಾಗದ ಗ್ರಾಮವೊಂದರ ಮುಖಂಡರು ತಿಳಿಸಿದ್ದಾರೆ.

ಪ್ರತಿಭಟನೆ ತೀವ್ರ, ಮತ್ತೆ 6 ಸಾವು

ಮ್ಯಾನ್ಮಾರ್ (ರಾಯಿಟರ್ಸ್‌): ಸೇನಾದಂಗೆ ವಿರುದ್ಧ ಪ್ರತಿಭಟನೆ ಇನ್ನಷ್ಟು ಚುರುಕುಗೊಂಡಿದ್ದು, ಸೇನಾಪಡೆಗಳು ಗುಂಡಿಗೆ ಮತ್ತೆ ಸುಮಾರು 6 ಮಂದಿ ಮೃತಪಟ್ಟಿದ್ದಾರೆ. 1988ರ ಘರ್ಷಣೆಯಲ್ಲಿ ಮೃತಪಟ್ಟಿದ್ದ ವಿದ್ಯಾರ್ಥಿಯೊಬ್ಬರ ವರ್ಷದ ಸ್ಮರಣೆ ಕಾರ್ಯಕ್ರಮ ಶನಿವಾರ ಹಿಂಸೆಗೆ ತಿರುಗಿತು.

ಮ್ಯಾಂಡಲೇ ನಗರದಲ್ಲಿ ಪ್ರತಿಭಟನಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ಮೂವರು ಸತ್ತರು. ಸೆಂಟ್ರಲ್‌ ಟೌನ್‌ನಲ್ಲಿ ಒಬ್ಬರು, ಯಾಂಗೋನ್‌ನಲ್ಲಿ ಇಬ್ಬರು ಮೃತಪಟ್ಟರು ಎಂದು ವರದಿಗಳು ತಿಳಿಸಿವೆ.

ಗಾಯಾಳುಗಳ ಬಳಿ ಆ್ಯಂಬುಲೆನ್ಸ್ ಹೋಗದಂತೆ ಭದ್ರತಾ ಸಿಬ್ಬಂದಿ ಮೊದಲು ತಡೆದರು. ಗಾಯಗೊಂಡಿದ್ದ ಒಬ್ಬರು ಆ್ಯಂಬುಲೆನ್ಸ್ ಬರುವ ವೇಳೆಗೇ ಮೃತಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಅಮೆರಿಕ, ಭಾರತ, ಆಸ್ಟ್ರೇಲಿಯ, ಜಪಾನ್‌ ಮುಖಂಡರು ಈಚೆಗೆ ಆಗ್ರಹಪಡಿಸಿದ್ದರು. ಪ್ರತಿಭಟನೆ ಹತ್ತಿಕ್ಕಲು ಸೇನಾಡಳಿತ ಯತ್ನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.