ಲಖನೌ: ಇಲ್ಲಿನ ಫತೇಹ್‌ಪುರ ಜಿಲ್ಲೆಯಲ್ಲಿರುವ 200 ವರ್ಷದ ಹಳೆಯ ‘ಮಕ್‌ಬಾರ’ (ಸಮಾಧಿ) ಹಾಗೂ ಎರಡು ‘ಮಜಾರ್’ (ದೇಗುಲ)ಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಸೋಮವಾರ ಹಾನಿಗೊಳಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
‘ಸಮಾಧಿಯು ಈ ಹಿಂದೆ ದೇವಾಲಯವಾಗಿತ್ತು. ಮುಸಲ್ಮಾನರ ಆಡಳಿತದಲ್ಲಿ ಅದನ್ನು ಸಮಾಧಿಯನ್ನಾಗಿ ಪರಿವರ್ತಿಸಲಾಗಿತ್ತು’ ಎಂದು ಹಿಂದೂ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ‘ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಕಾರ್ಯಕರ್ತರು ಸಮಾಧಿ ಮುಂದೆ ಸೇರಿದ್ದರು. ಈ ವೇಳೆ ಅಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದು, ‘ನವಾಬ್ ಅಬ್ದೂಸ್ ಸಮಾಧಿ’ಗೆ ತೆರಳಿ ಆರತಿ ಹಾಗೂ ಪೂಜೆ ಸಲ್ಲಿಸಿದರು.
ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಮಕ್‌ಲಾಲ್ ಪಾಲ್, ಮಾಜಿ ಶಾಸಕ ವಿಕ್ರಮ್ ಸಿಂಗ್ ನೇತೃತ್ವದಲ್ಲಿ ಒಳಗೆ ನುಗ್ಗಿದ ಕಾರ್ಯಕರ್ತರು ಹನುಮಾನ್ ಚಾಲೀಸಾವನ್ನು ಪಠಿಸಿದ್ದಾರೆ.
ಈ ವೇಳೆ ಕೆಲವರು ಆವರಣದಲ್ಲಿದ್ದ ಎರಡು ಒಳಗಿದ್ದ ಎರಡು ದೇಗುಲಗಳನ್ನು ಕಲ್ಲು ಹಾಗೂ ಬಡಿಗೆಗಳಿಂದ ಹಾನಿಗೊಳಿಸಿದ್ದಾರೆ. ಕೆಲವರು ಸಮಾಧಿ ಮೇಲೆ ದೊಡ್ದದಾದ ಕಲ್ಲು, ಲಾಠಿ ಬಳಸಿ ಹಾನಿಗೊಳಿಸುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ದಾಖಲಾಗಿದೆ.
ಈ ವೇಳೆ ಮತ್ತೊಂದು ಸಮುದಾಯದವರು ಸ್ಥಳಕ್ಕೆ ಭೇಟಿ ನೀಡಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರ ಜೊತೆಗೆ ವಾಗ್ವಾದ ನಡೆಸಿದ್ದಾರೆ.
‘ತಕ್ಷಣವೇ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಜನರು ಒಳಪ್ರವೇಶಿದಂತೆ ತಡೆಯಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.