ADVERTISEMENT

ಭಾರತದಲ್ಲಿ ಬೀದಿ ಬದಿ ಮಕ್ಕಳ ಸಂಖ್ಯೆ ಎಷ್ಟು? ಎನ್‌ಪಿಸಿಆರ್ ವರದಿ ಹೇಳುವುದೇನು?

ಪಿಟಿಐ
Published 27 ಮಾರ್ಚ್ 2022, 11:20 IST
Last Updated 27 ಮಾರ್ಚ್ 2022, 11:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಾದ್ಯಂತ 20,000 ಬೀದಿ ಬದಿಯ ಮಕ್ಕಳನ್ನು ಪತ್ತೆ ಹಚ್ಚಲಾಗಿದ್ದು, ಇದೀಗ ಅವರಿಗೆ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಗಾಗಿರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ಮುಖ್ಯಸ್ಥ ಪ್ರಿಯಾಂಕ್ ಕಾನೂಂಗೊ ತಿಳಿಸಿದ್ದಾರೆ.

ದೇಶದಾದ್ಯಂತ 15-20 ಲಕ್ಷ ಮಕ್ಕಳು ಬೀದಿ ಬದಿಯಲ್ಲಿ ವಾಸ ಮಾಡುತ್ತಿರುವ ಸಾಧ್ಯತೆಯಿದೆ ಎಂದು ಅವರು ಅಂದಾಜಿಸಿದ್ದಾರೆ.

ದೇಶದಲ್ಲಿ ಬೀದಿ ಬದಿ ಮಕ್ಕಳ ಪರಿಸ್ಥಿತಿ ಬಗ್ಗೆ ಸುದ್ದಿಸಂಸ್ಥೆ ಜತೆ ಭಾನುವಾರ ಮಾತನಾಡಿದ ಅವರು, ‘ಬೀದಿ ಮಕ್ಕಳ ನೋಂದಣಿಗಾಗಿ ‘ಬಾಲ ಸ್ವರಾಜ್’ ವೆಬ್ ಪೋರ್ಟಲ್ ಆರಂಭಿಸಲಾಗಿದ್ದು, ಬೀದಿ ಮಕ್ಕಳ ಮೇಲೆ ನಿಗಾ ವಹಿಸಬಹುದಾಗಿದೆ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ADVERTISEMENT

ಬೀದಿ ಬದಿ ಮಕ್ಕಳು ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ದೆಹಲಿ ಮತ್ತು ಮಹಾರಾಷ್ಟ್ರ ಸರ್ಕಾರಗಳು ಏನೂ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೀದಿಬದಿ ಮಕ್ಕಳಲ್ಲಿ 3 ಪ್ರಕಾರಗಳಲ್ಲಿ ಗುರುತಿಸಲಾಗಿದೆ. ಮನೆ ಬಿಟ್ಟು ಓಡಿ ಬಂದಿರುವ ಮಕ್ಕಳು, ಕುಟುಂಬದ ಜತೆಯೇ ಮಕ್ಕಳು ಬೀದಿಬದಿಯಲ್ಲಿ ವಾಸಿಸುತ್ತಿರುವುದು ಮತ್ತು ಕೊಳೆಗೇರಿ ಪ್ರದೇಶಗಳ ಪಕ್ಕದ ಬೀದಿಯಲ್ಲಿ ವಾಸವಾಗಿರುವ ಮಕ್ಕಳು. 3ನೇ ಪ್ರಕಾರದ ಮಕ್ಕಳು ಹಗಲು ಪೂರ್ತಿ ಬೀದಿಬದಿಯಲ್ಲೇ ಇರುತ್ತಾರೆ. ರಾತ್ರಿ ವೇಳೆ ಮಾತ್ರ ಮನೆಗೆ ಹೋಗುತ್ತಾರೆ ಎಂದು ಹೇಳಿದರು.

ಬೀದಿಬದಿ ಮಕ್ಕಳ ಪತ್ತೆ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ವಿಚಾರದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಇಂಥ ಮಕ್ಕಳ ಪುನರ್ವಸತಿಗೆ ಅಗತ್ಯವಿರುವ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಜತೆಗೆ ಇದು ಕೇವಲ ಕಡತಕ್ಕೆ ಸೀಮಿತವಾಗಬಾರದು ಎಂದೂ ಹೇಳಿತ್ತು. ಈ ಕುರಿತ ಮುಂದಿನ ವಿಚಾರಣೆ ಸೋಮವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.