ADVERTISEMENT

ಗೋಧ್ರಾ ಹತ್ಯಾಕಾಂಡ: 19 ವರ್ಷಗಳ ಬಳಿಕ ಪ್ರಮುಖ ಆರೋಪಿ ಬಂಧನ

ಪಿಟಿಐ
Published 15 ಫೆಬ್ರುವರಿ 2021, 20:42 IST
Last Updated 15 ಫೆಬ್ರುವರಿ 2021, 20:42 IST
   

ಅಹಮದಾಬಾದ್‌: ಗೋಧ್ರಾ ರೈಲು ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 19 ವರ್ಷಗಳ ಬಳಿಕ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.

ಗೋಧ್ರಾ ನಗರದ ರಫೀಕ್‌ ಹುಸೇನ್‌ ಭಾತುಕ್‌ ಬಂಧಿತ ಆರೋಪಿ. ಈತನೇ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಪಂಚಮಹಲ್‌ ಪೊಲೀಸ್‌ ವರಿಷ್ಠಾಧಿಕಾರಿ ಲೀನಾ ಪಾಟೀಲ್‌ ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಗೋಧ್ರಾ ಪೊಲೀಸರ ತಂಡ, ರೈಲ್ವೆ ನಿಲ್ದಾಣ ಬಳಿಯ ಸಿಗ್ನಲ್‌ ಫಾಲಿಯಾ ಪ್ರದೇಶದಲ್ಲಿ ಮನೆಯೊಂದರಲ್ಲಿದ್ದ ಭಾತುಕ್‌ನನ್ನು ಬಂಧಿಸಿತು. ಈತ ರೈಲು ಬೋಗಿಗಳಿಗೆ ಬೆಂಕಿ ಹಚ್ಚಲು ಪೆಟ್ರೋಲ್‌ ವ್ಯವಸ್ಥೆ ಮಾಡಿದ್ದ ಮತ್ತು ಗಲಭೆಗೂ ಪ್ರಚೋದನೆ ನೀಡಿದ್ದ. ತನಿಖೆ ಸಂದರ್ಭದಲ್ಲಿ ಈತನ ಹೆಸರು ಕಾಣಿಸಿಕೊಂಡ ತಕ್ಷಣ ದೆಹಲಿಗೆ ಪರಾರಿಯಾಗಿದ್ದ. ಈತನ ವಿರುದ್ಧ ಕೊಲೆ ಮತ್ತು ಗಲಭೆ ಸೃಷ್ಟಿಸಿದ ಆರೋಪಗಳನ್ನು ಹೊರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

2002ರ ಫೆಬ್ರುವರಿ 27ರಂದು ರೈಲಿಗೆ ಬೆಂಕಿ ಹಚ್ಚಿದ್ದರಿಂದ 59 ಮಂದಿ ಕರಸೇವಕರು ಸಜೀವ ದಹನವಾಗಿದ್ದರು. ಇದು ಗುಜರಾತ್ ಇತಿಹಾಸದಲ್ಲಿ ಭೀಕರ ಕೋಮುಗಲಭೆಗೆ ಕಾರಣವಾಗಿತ್ತು.

ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಭಾತುಕ್‌ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಬೋಗಿಗಳ ಮೇಲೆ ಕಲ್ಲು ತೂರಾಟ ನಡೆಸಿ ಪೆಟ್ರೋಲ್‌ ಸುರಿದಿದ್ದ. ಬಳಿಕ ಇತರ ಆರೋಪಿಗಳು ಬೆಂಕಿ ಹಚ್ಚಿದ್ದರು. ಗೋಧ್ರಾದಿಂದ ಪರಾರಿಯಾದ ಮೇಲೆ ದೆಹಲಿಯಲ್ಲಿ ಈತ ರೈಲ್ವೆ ನಿಲ್ದಾಣಗಳಲ್ಲಿ ಮತ್ತು ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದ ಎಂದು ಲೀನಾ ಪಾಟೀಲ್‌ ಮಾಹಿತಿ ನೀಡಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಸಲೀಂ ಇಬ್ರಾಹಿಂ ಬಾದಾಮ್‌ ಅಕಾ ಸಲೀಂ ಪನ್ವಾಲಾ, ಶೌಕತ್‌ ಚರ್ಕಾ ಮತ್ತು ಅಬ್ದುಲ್‌ಮಜೀದ್‌ ಯೂಸೂಫ್‌ ಇನ್ನೂ ಪತ್ತೆಯಾಗಿಲ್ಲ. ಈ ಮೂವರು ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾರೆ ಎನ್ನುವ ವರದಿಗಳಿವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.