ಜೈಸಲ್ಮೇರ್: ಮಂಗಳವಾರ ಮಧ್ಯಾಹ್ನ ಜೈಸಲ್ಮೇರ್‌ನಿಂದ ಜೋಧಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಹಠಾತ್ ಬೆಂಕಿ ಹೊತ್ತಿಕೊಂಡ ಪರಿಣಾಮ 21 ಜನರು ಸಜೀವ ದಹನಗೊಂಡಿದ್ದಾರೆ. ಗಾಯಗೊಂಡಿದ್ದ ಜೀವನ್ಮರಣ ಸ್ಥಿತಿಯಲ್ಲಿದ್ದ ಎಂಟು ವರ್ಷದ ಬಾಲಕನೊಬ್ಬ ಜೋಧಪುರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ 16 ಜನರಲ್ಲಿ ನಾಲ್ವರು ಕೃತಕ ಉಸಿರಾಟ ವ್ಯವಸ್ಥೆಯ ನೆರವಿನಲ್ಲಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಕುಟುಂಬ ಸದಸ್ಯರಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಹಿಸಲಾಗಿದ್ದು, ಶವಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಮಧ್ಯಾಹ್ನ 3ಕ್ಕೆ ಹೊರಟಿದ್ದ ಬಸ್‌ನಲ್ಲಿ 57 ಪ್ರಯಾಣಿಕರು ಇದ್ದರು ಎಂದು ರಾಜಸ್ಥಾನದ ಪೊಲೀಸರು ತಿಳಿಸಿದ್ದಾರೆ. ಬಸ್ ಜೈಸಲ್ಮೇರ್–ಜೋಧಪುರ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್‌ನ ಹಿಂಬಾದಿಂದ ಹೊಗೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಚಾಲಕ ಬಸ್ ನಿಲ್ಲಿಸಿದರಾದರೂ, ಕ್ಷಣಾರ್ಧದಲ್ಲೆ ಅದು ಬೆಂಕಿಗೆ ಆಹುತಿಯಾಯಿತು.
ಸ್ಥಳೀಯರು ಮತ್ತು ದಾರಿಹೋಕರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ್ದು, ಸೇನೆ ಕೂಡಾ ನೆರವಾಗಿದೆ. ಗಾಯಗೊಂಡ ಪ್ರಯಾಣಿಕರನ್ನು ಜೈಸಲ್ಮೇರ್‌ನ ಜವಾಹರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.