
ಸಾಂದರ್ಭಿಕ ಚಿತ್ರ
ಹೈದರಾಬಾದ್: ತೆಲಂಗಾಣ ವಿಧಾನಸಭೆಯ ಚುನಾವಣಾ ಕರ್ತವ್ಯಕ್ಕೆ 2.5 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ ಆದಾಗಿನಿಂದ ₹ 709 ಕೋಟಿ ಮೌಲ್ಯದ ಚಿನ್ನ, ಮದ್ಯ, ಉಡುಗೊರೆಗಳು, ನಗದು ಮತ್ತು ಇತರ ವಸ್ತುಗಳನ್ನು ಕಾನೂನು ಜಾರಿ ಸಂಸ್ಥೆಗಳು ವಶಕ್ಕೆ ತೆಗೆದುಕೊಂಡಿವೆ ಎಂದು ಮುಖ್ಯ ಚುನಾವಣಾ ಅಧಿಕಾರಿ ವಿಕಾಸ್ ರಾಜ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2.5 ಲಕ್ಷ ಸಿಬ್ಬಂದಿಯಲ್ಲಿ 45 ಸಾವಿರ ತೆಲಂಗಾಣ ಪೊಲೀಸರು, ನೆರೆರಾಜ್ಯಗಳ 23.5 ಸಾವಿರ ಗೃಹ ರಕ್ಷಕರು ಇರಲಿದ್ದಾರೆ. ಇನ್ನೆರಡು ದಿನಗಳಲ್ಲಿ ಗೃಹ ರಕ್ಷಕರು ರಾಜ್ಯಕ್ಕೆ ಬರಲಿದ್ದಾರೆ. ಚುನಾವಣಾ ಆಯೋಗ ಕೂಡ 3,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಿದೆ. ತೆಲಂಗಾಣ ಪೊಲೀಸರ 50 ತಂಡಗಳು ಮತ್ತು ಕೇಂದ್ರೀಯ ಭದ್ರತಾ ಪಡೆಗಳ 375 ತಂಡವು ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆ ವಹಿಸಲಿದ್ದಾರೆ’ ಎಂದು ತಿಳಿಸಿದರು.
1,68,612 ಅಂಚೆ ಮತಪತ್ರಗಳನ್ನು ಬಿಡುಗಡೆ ಮಾಡಲಾಗಿತ್ತು. ನವೆಂಬರ್ 26ರವರೆಗೆ ಅಂಚೆ ಮೂಲಕ 95,526 ಮತಗಳು ಚಲಾವಣೆಯಾಗಿವೆ. 26,660 ಮತದಾರರು ಮನೆಯಿಂದಲೇ ಮತದಾನ ಮಾಡಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.