ADVERTISEMENT

ಕಾರ್ಗಿಲ್ ವಿಜಯ: ‘ರಜತ ಜಯಂತಿ’ಯಲ್ಲಿ ಗೌರವ ನಮನ

ಪಿಟಿಐ
Published 14 ಜುಲೈ 2024, 11:33 IST
Last Updated 14 ಜುಲೈ 2024, 11:33 IST
<div class="paragraphs"><p> ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕ</p></div>

ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕ

   

ನವದೆಹಲಿ: ಭಾರತೀಯ ಸೇನೆಯು ವಿಜಯದ ಸಂಕೇತ ತೋರಿಸಿ ಸಂಭ್ರಮಿಸಿದ ಕಾರ್ಗಿಲ್‌ ಯುದ್ಧದ ಗೆಲುವಿಗೆ ಈಗ ರಜತ ವರ್ಷದ ಸಂಭ್ರಮ. 25 ವರ್ಷಗಳ ಹಿಂದೆ 1999ರ ಜುಲೈ 26ರಂದು ಪಾಕ್‌ ಸೇನೆಯನ್ನು ಹಿಮ್ಮೆಟ್ಟಿಸಿ ಸಾಮರ್ಥ್ಯ ಮೆರೆದಿದ್ದ ಭಾರತೀಯ ಸೇನೆಯು ವಿಜಯೋತ್ಸವ ಆಚರಿಸಿತ್ತು.

ಆ ಗೆಲುವಿನ ನೆನಪಿಗಾಗಿ ಜುಲೈ 12–26ರವರೆಗೆ ಇಲ್ಲಿನ ವಾಯುಪಡೆ ಕೇಂದ್ರದಲ್ಲಿ ಕಾರ್ಗಿಲ್‌ ‘ವಿಜಯ್ ದಿವಸ್‌ ರಜತ ಜಯಂತಿ’ ಆಯೋಜಿಸಲಾಗುತ್ತಿದೆ. ಈ ನಿಮಿತ್ತ, ಹುತಾತ್ಮ ಯೋಧರಿಗೆ ಗೌರವ ನಮನ, ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. 

ADVERTISEMENT

ವಾಯುಪಡೆ ಕೇಂದ್ರದಲ್ಲಿರುವ ಯುದ್ಧ ಸ್ಮಾರಕಕ್ಕೆ ಶನಿವಾರ ಪುಷ್ಪಗುಚ್ಛ ಅರ್ಪಿಸಿದ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್‌ ಮಾರ್ಷಲ್ ವಿ.ಆರ್.ಚೌಧರಿ, ಹುತಾತ್ಮರಿಗೆ ನಮನ ಸಲ್ಲಿಸಿದರು. ದೇಶಕ್ಕಾಗಿ ಜೀವತ್ಯಾಗ ಮಾಡಿದವರ ಕುಟುಂಬ ಸದಸ್ಯರನ್ನು ಸನ್ಮಾನಿಸಿ, ಸಂವಾದವನ್ನು ನಡೆಸಿದರು. ಈ ಮೂಲಕ ಕಾರ್ಗಿಲ್‌ ವಿಜಯದಲ್ಲಿ ವಾಯುಪಡೆಯ ಕೊಡುಗೆ ಸ್ಮರಿಸಲಾಯಿತು ಎಂದು ಹೇಳಿಕೆ ತಿಳಿಸಿದೆ.

ಕಾರ್ಯಕ್ರಮದ ಭಾಗವಾಗಿ ಆಕರ್ಷಕ ವೈಮಾನಿಕ ಪ್ರದರ್ಶನವು ನಡೆಯಿತು. ಆಕಾಶ್ ಗಂಗಾ ತಂಡವು ಜಾಗ್ವಾರ್, ಸುಕೋಯ್‌ 30 ಎಂಕೆಐ, ರಫೇಲ್‌ ಯುದ್ಧ ವಿಮಾನದೊಂದಿಗೆ ಪ್ರದರ್ಶನ ನೀಡಿತು. ಹುತಾತ್ಮ ಯೋಧರ ಗೌರವಾರ್ಥ ಬಾನಂಗಳದಲ್ಲಿ ‘ಎಂಐ 17 ವಿ5’ ವಿಮಾನಗಳ ಮೂಲಕ ‘ಮಿಸ್ಸಿಂಗ್ ಮ್ಯಾನ್’ ರೂಪಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಅಲ್ಲದೆ, ಎಂಐ 17 ವಿ5, ಚೀತಾ, ಚಿನೂಕ್‌ ಹೆಲಿಕಾಪ್ಟರ್‌ಗಳಿಂದ ಏರ್ ವಾರಿಯರ್‌ ಡ್ರಿಲ್‌ ತಂಡ ಆಕರ್ಷಕ ಪ್ರದರ್ಶನವನ್ನು ನೀಡಿತು.

ಆಕರ್ಷಕ ವೈಮಾನಿಕ ಪ್ರದರ್ಶನಕ್ಕೆ 5000 ಜನರು ಸಾಕ್ಷಿಯಾದರು. ಇವರಲ್ಲಿ ವಿದ್ಯಾರ್ಥಿಗಳು, ಸ್ಥಳೀಯ ನಿವಾಸಿಗಳು, ಸೇನಾ ಸಿಬ್ಬಂದಿಯ ಕುಟುಂಬಗಳ ಸದಸ್ಯರು ಇದ್ದರು. ಕಾರ್ಗಿಲ್‌ ವಿಜಯವು ಸೇನಾ ವೈಮಾನಿಕ ಪಡೆಯ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿದೆ ಎಂದು ಹೇಳಿಕೆ ತಿಳಿಸಿದೆ. 

ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ ನಡೆದಿದ್ದ ‘ಆಪರೇಷನ್ ವಿಜಯ್‌’ ಯಶಸ್ವಿಯಾಗಿದೆ. ಕಾರ್ಯಾಚರಣೆ ಮುಗಿದಿದೆ ಎಂದು ಜುಲೈ 26, 1999ರಂದು ಘೋಷಿಸಲಾಗಿತ್ತು. ಲಡಾಖ್‌ನ ಪ್ರಮುಖ ತಾಣವನ್ನು ತ್ವರಿತವಾಗಿ ಅತಿಕ್ರಮಿಸಲು ಮುಂದಾಗಿದ್ದ ಪಾಕ್‌ ಸೇನೆಯನ್ನು ಹಿಮ್ಮೆಟ್ಟಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.