ADVERTISEMENT

ಶಂಕಿತ ಉಗ್ರರ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಮೂವರು ಯೋಧರು ಹುತಾತ್ಮ

ಪಿಟಿಐ
Published 30 ಜುಲೈ 2020, 11:00 IST
Last Updated 30 ಜುಲೈ 2020, 11:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂಫಾಲ: ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಶಂಕಿತ ಉಗ್ರರು ನಡೆಸಿದ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಮೂವರು ಸಿಬ್ಬಂದಿಮೃತಪಟ್ಟಿದ್ದಾರೆ ಮತ್ತು ಆರು ಜನರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಬುಧವಾರ ಸಂಜೆ 6.30 ರ ಸುಮಾರಿಗೆ ಭಾರತ-ಮಯನ್ಮಾರ್ ಗಡಿಯ ಬಳಿಯ ಚಾಂಡೆಲ್‌ನಲ್ಲಿರುವ ಖೊಂಗ್ಟಾಲ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ದುಷ್ಕರ್ಮಿಗಳು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಸ್ಫೋಟಿಸಿದ್ದಾರೆ ಮತ್ತು ಅಸ್ಸಾಂ ರೈಫಲ್ಸ್ ಸಿಬ್ಬಂದಿಗೆ ಗುಂಡು ಹಾರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮರಣೋತ್ತರ ಪರೀಕ್ಷೆಗಾಗಿ ಮೂವರು ಮೃತ ಯೋಧರ ಶವಗಳನ್ನು ಇಂಫಾಲ್‌ನ ಜವಾಹರಲಾಲ್ ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಜೆಎನ್‌ಐಎಂಎಸ್) ಆಸ್ಪತ್ರೆಗೆ ಕಳುಹಿಸಲಾಗಿದೆ.

ADVERTISEMENT

ಗಾಯಾಳುಗಳನ್ನು ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾವುದೇ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ, ದಾಳಿಯ ಹಿಂದೆ ನಿಷೇಧಿತ ಉಗ್ರ ಸಂಘಟನೆ ಪೀಪಲ್ಸ್ ಲಿಬರೇಶನ್ ಆರ್ಮಿ ಭಾಗಿಯಾಗಿದೆ ಎಂದು ಭದ್ರತಾ ಪಡೆಗಳು ಶಂಕಿಸಿವೆ.

ವಿದೇಶಿ ಮೂಲದ ಏರ್ ರೈಫಲ್ ಸ್ಕೋಪ್ ವಶ

ಚಂಪೈ ಜಿಲ್ಲೆಯ ಜೋಖಾವ್ತಾರ್‌ನಿಂದ ಅಸ್ಸಾಂ ರೈಫಲ್ಸ್ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಅಕ್ರಮ ಏರ್ ರೈಫಲ್ ಸ್ಕೋಪ್‌‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜುಲೈ 29 ರಂದು ಅಸ್ಸಾಂ ರೈಫಲ್ಸ್ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ, ಚಂಪೈ ಜಿಲ್ಲೆಯ ಜೋಖಾವ್ತಾರ್‌ನಲ್ಲಿ ಸುಮಾರು ₹ 50 ಲಕ್ಷ ಮೌಲ್ಯದ ಬುಶ್ನೆಲ್, ಲ್ಯುಪೋಲ್ಡ್ ಮತ್ತು ಮಾರ್ಕೂಲ್ ಒಳಗೊಡಂತೆ ವಿದೇಶಿ ಮೂಲದ ಅಪಾರ ಪ್ರಮಾಣದ ಅಕ್ರಮ ಏರ್ ರೈಫಲ್ ಸ್ಕೋಪ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಅಸ್ಸಾಂ ರೈಫಲ್ಸ್ ಬುಧವಾರ ತಡರಾತ್ರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.