ADVERTISEMENT

ಸಚಿವರ ಕಾರು ತಪಾಸಣೆ ಮಾಡದ ಮೂವರು ಪೊಲೀಸರ ಅಮಾನತು

ಪಿಟಿಐ
Published 9 ಸೆಪ್ಟೆಂಬರ್ 2019, 19:45 IST
Last Updated 9 ಸೆಪ್ಟೆಂಬರ್ 2019, 19:45 IST
   

ಪಟ್ನಾ : ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳಿಸಲು ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಕೇಂದ್ರದ ರಾಜ್ಯ ಸಚಿವ ಅಶ್ವಿನಿ ಕುಮಾರ್‌ ಚೌಬೆ ಅವರಿಗೆ ಸೇರಿದ್ದ ಕಾರಿನ ದಾಖಲೆಗಳನ್ನು ತಪಾಸಣೆ ಮಾಡದೇ ಬಿಟ್ಟು ಕಳುಹಿಸಿದ ಆರೋಪದ ಮೇಲೆ ಸಬ್‌ ಇನ್‌ಸ್ಪೆಕ್ಟರ್‌ ಸೇರಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಟಿಂಟೆಡ್‌ ಗ್ಲಾಸ್‌ ಹೊಂದಿದ್ದ ಈ ಕಾರನ್ನು ಸಚಿವರ ಪುತ್ರ ಅರಿಜಿತ್‌ ಚೌಬೆ ಚಾಲನೆ ಮಾಡುತ್ತಿದ್ದರು. ಸಚಿವರ ಕುಟುಂಬದವರೂ ಕಾರಿನಲ್ಲಿದ್ದರು. ಪೊಲೀಸರ ಸೂಚನೆ ಮೇರೆಗೆ ಅರಿಜಿತ್‌ ಅವರು ಕಾರನ್ನು ನಿಲ್ಲಿಸಿದ್ದರು. ಆದರೆ, ದಾಖಲೆಪತ್ರಗಳನ್ನು ತಪಾಸಣೆ ನಡೆಸದೇ ಕಾರನ್ನು ಕಳುಹಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಸಬ್‌ ಇನ್‌ಸ್ಪೆಕ್ಟರ್‌ ದೇವಪಾಲ್‌ ಪಾಸ್ವಾನ್‌, ಕಾನ್‌ಸ್ಟೇಬಲ್‌ಗಳಾದ ದಿಲೀಪ್‌ ಚಂದ್ರ ಸಿಂಗ್‌ ಮತ್ತು ಪಪ್ಪು ಕುಮಾರ ಅಮಾನತುಗೊಂಡವರು. ಈ ಮೂವರು ಕರ್ತವ್ಯಲೋಪ ಎಸಗಿದ್ದಾರೆ ಎಂದು ಪಟ್ನಾ ಪೊಲೀಸ್‌ ಆಯುಕ್ತ ಆನಂದ ಕಿಶೋರ್‌ ನಿರ್ದೇಶನದ ಮೇರೆಗೆ ಪೊಲೀಸ್‌ ವರಿಷ್ಠಾಧಿಕಾರಿ (ಸಂಚಾರ) ಡಿ.ಅಮರ್ಕೇಶ್‌ ಅಮಾನತು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT