ADVERTISEMENT

ಶೂನ್ಯ ದಾಖಲಾತಿಯ 400 ಶಾಲೆಗಳನ್ನು ಮುಚ್ಚಲಾಗಿದೆ: ಅರುಣಾಚಲ ಪ್ರದೇಶ ಸಿಎಂ ಖಂಡು

ಪಿಟಿಐ
Published 18 ನವೆಂಬರ್ 2021, 5:44 IST
Last Updated 18 ನವೆಂಬರ್ 2021, 5:44 IST
ಪೆಮಾ ಖಂಡು
ಪೆಮಾ ಖಂಡು   

ಇಟಾನಗರ: ‘ರಾಜ್ಯದಲ್ಲಿ ಶೂನ್ಯ ದಾಖಲಾತಿ ಇರುವ 400 ಶಾಲೆಗಳನ್ನು ಮುಚ್ಚಿದ್ದೇವೆ’ ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ತಿಳಿಸಿದ್ದಾರೆ.

ಸ್ವಾತಂತ್ರ್ಯ ನಂತರ ರಾಜ್ಯದಲ್ಲಿ ಸುಮಾರು 3,000 ಸರ್ಕಾರಿ ಶಾಲೆಗಳು ನಿರ್ಮಾಣವಾಗಿವೆ. ಆದರೆ ಶಿಕ್ಷಣದ ಗುಣಮಟ್ಟ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಏರಿಕೆ ಕಂಡಿಲ್ಲ. ಹೀಗಾಗಿ ರಾಜ್ಯದ ಶಿಕ್ಷಣ ವ್ಯವಸ್ಥೆಯ ಚಿತ್ರಣವನ್ನು ಪರಿಷ್ಕರಿಸಲು ಸರ್ಕಾರ ಪಣತೊಟ್ಟಿದೆ ಎಂದು ಅವರು ಹೇಳಿದರು.

ಪಶ್ಚಿಮ ಕಮೆಂಗ್ ಜಿಲ್ಲೆಯ ಬೊಮ್ಡಿಲಾದಲ್ಲಿ ಸರ್ಕಾರಿ ಕಾಲೇಜಿನ ಶಾಶ್ವತ ಕ್ಯಾಂಪಸ್ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ನಾವು ಇಲ್ಲಿಯವರೆಗೆ ರಾಜ್ಯದಲ್ಲಿ ಶೂನ್ಯ ದಾಖಲಾತಿ ಇರುವ 400 ಶಾಲೆಗಳನ್ನು ಮುಚ್ಚಿದ್ದೇವೆ. ರಾಜ್ಯದ 60 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ತಲಾ ಒಂದೊಂದು ಶಾಲೆಯನ್ನು ಅಗತ್ಯ ಮೂಲ ಸೌರ್ಕಯಗಳೊಂದಿಗೆ ಮಾದರಿ ಶಾಲೆಯನ್ನಾಗಿ ಅಭಿವೃದ್ಧಿಪಡಿಸಲು ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ತಿಳಿಸಿದರು.

ಸಮುದಾಯ ಆಧಾರಿತ ಸಂಸ್ಥೆಗಳು ತಮ್ಮ ಪ್ರದೇಶಗಳಿಗೆ ಭೇಟಿ ನೀಡಿ, ಯಾವ ಶಾಲೆಗಳನ್ನು ಮುಚ್ಚಬಹುದು ಮತ್ತು ಯಾವ ಶಾಲೆಗಳನ್ನು ಮತ್ತೊಂದು ಶಾಲೆಯೊಂದಿಗೆ ವಿಲೀನಗೊಳಿಸಬಹುದು ಎಂಬುದರ ಕುರಿತು ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಇದೇ ವೇಳೆ ಮನವಿ ಮಾಡಿದರು.

ಶಾಲೆಗಳಲ್ಲಿ ಸಮರ್ಪಕ ಮೂಲಸೌಕರ್ಯದ ಜತೆಗೆ ಅಗತ್ಯವಿರುವಷ್ಟು ಶಿಕ್ಷಕರ ನೇಮಕಕ್ಕೆ ಸರ್ಕಾರ ಆದ್ಯತೆ ನೀಡುತ್ತದೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.