ADVERTISEMENT

ಪಶ್ಚಿಮ ಬಂಗಾಳ: ಮಮತಾ ಸಂಪುಟಕ್ಕೆ 44 ಸಚಿವರ ಸೇರ್ಪಡೆ

ಪಿಟಿಐ
Published 10 ಮೇ 2021, 15:41 IST
Last Updated 10 ಮೇ 2021, 15:41 IST
ಕೋಲ್ಕತ್ತಾದ ರಾಜಭವನದಲ್ಲಿ ಸೋಮವಾರ ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ  ಪಿಟಿಐ ಚಿತ್ರ
ಕೋಲ್ಕತ್ತಾದ ರಾಜಭವನದಲ್ಲಿ ಸೋಮವಾರ ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ  ಪಿಟಿಐ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸಂಪುಟಕ್ಕೆ 44 ಸಚಿವರು ಸೋಮವಾರ ಸೇರ್ಪಡೆಯಾಗಿದ್ದಾರೆ. ಈ ಹಿಂದಿನ ಸಂಪುಟಕ್ಕೆ ಹೋಲಿಸಿದರೆ ಹಲವು ಮಹತ್ವದ ಬದಲಾವಣೆಗಳನ್ನು ಸಚಿವ ಸಂಪುಟದಲ್ಲಿ ಗುರುತಿಸಬಹುದಾಗಿದೆ.

ಗೃಹ ಮತ್ತು ಗುಡ್ಡಗಾಡು ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಭೂಮಿ ಮತ್ತು ಭೂ ಸುಧಾರಣೆ, ನಿರ್ವಸಿತರು ಮತ್ತು ಪುನರ್ವಸತಿ, ಮಾಹಿತಿ ಮತ್ತು ಸಂಸ್ಕೃತಿ ವ್ಯವಹಾರ, ಉತ್ತರ ಬಂಗಾಳ ಅಭಿವೃದ್ಧಿಯಂತಹ ಮಹತ್ವದ ಖಾತೆಗಳನ್ನು ಮಮತಾ ಅವರೇ ಇರಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ಸಚಿವರಾಗಿರುವ ಮೊಹಮ್ಮದ್‌ ಗುಲಾಂ ರಬ್ಬಾನಿ ಅವರಿಗೆ ಅಲ್ಪಸಂಖ್ಯಾತರ ವ್ಯವಹಾರ ಮತ್ತು ಮದರಸ ಶಿಕ್ಷಣ ಇಲಾಖೆಯನ್ನು ನೀಡಲಾಗಿದೆ.

ADVERTISEMENT

ಹೊಸ ಮುಖಗಳಾದ ಅಖಿಲ್‌ ಗಿರಿ ಅವರು ಸ್ವತಂತ್ರ ಹೊಣೆಗಾರಿಕೆಯ ರಾಜ್ಯ ಖಾತೆ ಸಚಿವರಾಗಿದ್ದಾರೆ. ಅವರಿಗೆ ಮೀನುಗಾರಿಕೆ ಖಾತೆ ಸಿಕ್ಕಿದೆ. ರತನ್‌ ದೇ ನಾಗ್‌ ಅವರು ಪರಿಸರ, ಹುಮಾಯೂನ್‌ ಕಬೀರ್‌ ಅವರು ತಾಂತ್ರಿಕ ಶಿಕ್ಷಣ, ಸಿಯುಲಿ ಸಹಾ ಅವರು ಪಂಚಾಯಿತಿ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾಗಿದ್ದಾರೆ.

ಅತ್ಯಂತ ಹಿರಿಯ ಶಾಸಕ ಸುಬ್ರತಾ ಮುಖರ್ಜಿ ಅವರು ಪಂಚಾಯಿತಿ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಯಲ್ಲಿಯೇ ಮುಂದುವರಿಯಲಿದ್ದಾರೆ. ಅನಾರೋಗ್ಯದಿಂದ ಚುನಾವಣೆಗೆ ಸ್ಪರ್ಧಿಸದ ಅಮಿತ್‌ ಮಿತ್ರಾ ಅವರು ಹಣಕಾಸು ಸಚಿವರಾಗಿ ಮುಂದುವರಿಯಲಿದ್ದಾರೆ.

ಸರ್ಕಾರದ ವಿರುದ್ಧ ಹರಿಹಾಯ್ದ ರಾಜ್ಯಪಾಲ
ರಾಜ್ಯ ಸರ್ಕಾರದ ವಿರುದ್ದ ರಾಜ್ಯಪಾಲ ಜಗದೀಪ್‌ ಧನ್‌ಕರ್‌ ಅವರು ಸಚಿವರಿಗೆ ಪ್ರಮಾಣ ವಚನ ಬೋಧಿಸಿದ ಕೆಲವೇ ನಿಮಿಷಗಳ ಬಳಿಕ ಹರಿಹಾಯ್ದಿದ್ದಾರೆ. ಚುನಾವಣೋತ್ತರ ಹಿಂಸಾಚಾರ ನಡೆದ ಸ್ಥಳಗಳಿಗೆ ಭೇಟಿ ನೀಡುವುದಾಗಿಯೂ ಹೇಳಿದ್ದಾರೆ.

ಮತದ ಹಕ್ಕು ಚಲಾಯಿಸಿದ್ದಕ್ಕಾಗಿ ಜನರು ಜೀವ ಕೈಯಲ್ಲಿ ಹಿಡಿದು ಪ್ರಾರ್ಥನೆ ಮಾಡಬೇಕಾದ ಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗಿದೆ. ಚುನಾವಣೋತ್ತರ ಹಿಂಸಾಚಾರದ ಸ್ಥಿತಿಯು ಆಘಾತಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

*
ಮತದಾನವು ವ್ಯಕ್ತಿಯ ಸಾವಿಗೆ ಕಾರಣವಾಗುತ್ತದೆ ಎಂದಾದರೆ ಪ್ರಜಾ‍ಪ್ರಭುತ್ವವು ಸಾಯುತ್ತಿದೆ ಎಂಬುದರ ಸೂಚನೆ ಅದು.
-ಜಗದೀಪ್‌ ಧನ್‌ಕರ್‌, ಪಶ್ಚಿಮ ಬಂಗಾಳ ರಾಜ್ಯಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.