ADVERTISEMENT

ಹರಿಯಾಣದಲ್ಲಿ 454 ಕಪ್ಪು ಶಿಲೀಂಧ್ರ ಪ್ರಕರಣ: ಕೋವಿಡ್ ಸೋಂಕಿಲ್ಲದವರಿಗೂ ಫಂಗಸ್

ಪಿಟಿಐ
Published 26 ಮೇ 2021, 2:17 IST
Last Updated 26 ಮೇ 2021, 2:17 IST
ಕಪ್ಪು ಶಿಲೀಂಧ್ರ ತಗುಲಿರುವ ಶಂಕಿತನ ಪರೀಕ್ಷೆ (ಸಾಂದರ್ಭಿಕ ಚಿತ್ರ)
ಕಪ್ಪು ಶಿಲೀಂಧ್ರ ತಗುಲಿರುವ ಶಂಕಿತನ ಪರೀಕ್ಷೆ (ಸಾಂದರ್ಭಿಕ ಚಿತ್ರ)   

ಚಂಡೀಗಡ: ಮೇ 24 ರವರೆಗೆ ಹರಿಯಾಣದಲ್ಲಿ 454 ಕಪ್ಪು ಶಿಲೀಂಧ್ರ ಅಥವಾ ಮ್ಯೂಕರ್‌ ಮೈಕೊಸಿಸ್ ಪ್ರಕರಣಗಳು ದಾಖಲಾಗಿದ್ದು, ಗುರುಗ್ರಾಮ ಜಿಲ್ಲೆಯಲ್ಲಿ ಗರಿಷ್ಠ 156 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಮಂಗಳವಾರ ತಿಳಿಸಿವೆ.

ಹಿಸಾರ್‌ನಲ್ಲಿ 95 ಪ್ರಕರಣಗಳು, ಫರಿದಾಬಾದ್‌ನಲ್ಲಿ 55, ರೋಹ್ಟಕ್ ಮತ್ತು ಸಿರ್ಸಾದಲ್ಲಿ ತಲಾ 27, ಪಾಣಿಪತ್‌ನಲ್ಲಿ 19 ಮತ್ತು ಅಂಬಾಲಾ 14 ಪ್ರಕರಣಗಳು ವರದಿಯಾಗಿವೆ.

ಕಪ್ಪು ಶಿಲೀಂಧ್ರಕ್ಕೆ ಗುರಿಯಾದವರೆಲ್ಲರೂ ಕೋವಿಡ್ ರೋಗಿಗಳು ಅಥವಾ ಮಧುಮೇಹಿಗಳಲ್ಲ ಎನ್ನುವ ಅಂಶವನ್ನು ಗಮನಿಸಿರುವ ಆರೋಗ್ಯ ಸಚಿವ ಅನಿಲ್ ವಿಜ್, ಮ್ಯೂಕರ್‌ ಮೈಕೊಸಿಸ್ ಕಾಯಿಲೆ ಕುರಿತಾಗಿ ಹೆಚ್ಚಿನ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ADVERTISEMENT

ಇಲ್ಲಿಯವರೆಗೆ ವಿಶ್ಲೇಷಿಸಿದ 413 ಕಪ್ಪು ಶಿಲೀಂಧ್ರದ ಪ್ರಕರಣಗಳಲ್ಲಿ 64 ಮಂದಿಯಲ್ಲಿ ಕೋವಿಡ್-19 ಸೋಂಕಿಲ್ಲದಿದ್ದರೆ, 79 ಮಂದಿ ಮಧುಮೇಹಿಗಳಲ್ಲ, 110 ಮಂದಿ ಸ್ಟೆರಾಯ್ಡ್ ಅನ್ನು ತೆಗೆದುಕೊಂಡಿಲ್ಲ ಮತ್ತು ಉಳಿದವರು ಆಮ್ಲಜನಕದ ಬೆಂಬಲದಲ್ಲಿಲ್ಲ ಎಂದು ಅವರು ಹೇಳಿದ್ದಾರೆ.

ಮ್ಯೂಕರ್ ಮೈಕೊಸಿಸ್ ಎನ್ನುವುದು ಪರಿಸರದಲ್ಲಿ ನೈಸರ್ಗಿಕವಾಗಿ ಕಂಡುಬರುವ ಮ್ಯೂಕರ್ ಮೈಸೆಟ್ಸ್ ಎಂದು ಕರೆಯಲ್ಪಡುವ ಶಿಲೀಂಧ್ರಗಳ ಗುಂಪಿನಿಂದ ಉಂಟಾಗುತ್ತದೆ. ಇದು ಮೂಗಿನ ಮೂಲಕ ಹರಡುತ್ತದೆ ಮತ್ತು ಕಣ್ಣುಗಳು ಸೇರಿದಂತೆ ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.

ತಜ್ಞರ ಪ್ರಕಾರ, ಕೋವಿಡ್-19, ಮಧುಮೇಹ, ಮೂತ್ರಪಿಂಡ ಕಾಯಿಲೆ, ಪಿತ್ತಜನಕಾಂಗ ಅಥವಾ ಹೃದಯ ಸಂಬಂಧಿ ಕಾಯಿಲೆಗಳು, ವಯೋ ಸಂಬಂಧಿ ಸಮಸ್ಯೆಗಳು ಅಥವಾ ಸಂಧಿವಾತದಂತಹ ಕಾಯಿಲೆಗಳಿಗೆ ಔಷಧಿಗಳನ್ನು ಪಡೆಯುತ್ತಿರುವವರು ಮ್ಯೂಕರ್ ಮೈಕೊಸಿಸ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚು.

ಅಂತಹ ರೋಗಿಗಳಿಗೆ ಸ್ಟೆರಾಯ್ಡ್‌ಗಳನ್ನು ನೀಡಿದರೆ, ಅವರ ರೋಗನಿರೋಧಕ ಶಕ್ತಿ ಮತ್ತಷ್ಟು ದುರ್ಬಲಗೊಳ್ಳುತ್ತದೆ ಮತ್ತು ಶಿಲೀಂಧ್ರವು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.