ADVERTISEMENT

ಭೂಗತ ಪಾತಕಿ ದಾವೂದ್ ಸೋದರನಿಗೆ ವಿಶೇಷ ಸತ್ಕಾರ: ಎಸ್‌ಐ ಸೇರಿ ಐವರು ಪೊಲೀಸರ ಅಮಾನತು

ಏಜೆನ್ಸೀಸ್
Published 27 ಅಕ್ಟೋಬರ್ 2018, 12:51 IST
Last Updated 27 ಅಕ್ಟೋಬರ್ 2018, 12:51 IST
   

ಮುಂಬೈ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹೋದರ ಇಕ್ಬಾಲ್‌ ಕಾಸ್ಕರ್‌ಗೆ ಜೈಲಿನಲ್ಲಿ ವಿಶೇಷ ಸತ್ಕಾರ ನೀಡಿದ ಆರೋಪದ ಮೇಲೆ ಎಸ್‌ಐ ಸೇರಿದಂತೆ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಠಾಣೆಯ ಜಂಟಿ ಪೊಲೀಸ್‌ ಆಯುಕ್ತ ಮಧುಕರ್‌ ಪಾಂಡೆ ಅಮಾನತು ಆದೇಶ ಹೊರಡಿಸಿದ್ದು, ಪೊಲೀಸರ ಹೆಸರುಗಳನ್ನು ಬಹಿರಂಗಪಡಿಸಿಲ್ಲ.

ಕಳೆದ ವರ್ಷ ಹಣ ಸುಲಿಗೆ ಪ್ರಕರಣವೊಂದರಲ್ಲಿ ಸೆರೆಸಿಕ್ಕಿ ಠಾಣೆ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕಾಸ್ಕರ್‌, ಗುರುವಾರ ಹಲ್ಲು ಮತ್ತು ಎದೆ ನೋವು ಎಂದು ಹೇಳಿಕೊಂಡಿದ್ದ.

ADVERTISEMENT

‘ನ್ಯಾಯಾಲಯವು ಕಾಸ್ಕರ್‌ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಗುರುವಾರ ಆದೇಶಿಸಿತ್ತು. ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಪೊಲೀಸರು ಕಾಸ್ಕರ್‌ಗೆ ವಿಶೇಷ ಸತ್ಕಾರ ನೀಡಿರುವುದು ನಂತರ ನಮಗೆ ಗೊತ್ತಾಯಿತು. ಈ ದೃಶ್ಯಾವಳಿಗಳನ್ನು ಖಾಸಗಿ ವಾಹಿನಿಯೊಂದು ಚಿತ್ರೀಕರಿಸಿದೆ’ ಎಂದು ಠಾಣೆ ಪೊಲೀಸ್‌ ಉಪ ಆಯುಕ್ತ ದೀಪಕ್‌ ದೇವರಾಜ್‌ ಹೇಳಿದ್ದಾರೆ.

ಕಾಸ್ಕರ್‌ನನ್ನು ಈ ಹಿಂದೆಯೂ ಹಲವು ಬಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಈ ಬಾರಿ ಪೊಲೀಸರೆದುರೇ ಸೆಗರೇಟ್‌ ಸೇದುತ್ತಿರುವುದು, ಪೊಲೀಸ್‌ ಸಿಬ್ಬಂದಿಯೇ ಬಿರಿಯಾನಿ ತಂದು ಕೊಡುತ್ತಿರುವುರು ವಿಡಿಯೊದಲ್ಲಿ ದಾಖಲಾಗಿದೆ.

‘ಆ ವಿಡಿಯೊವನ್ನು ಹಿರಿಯ ಅಧಿಕಾರಿಗಳೆದುರು ಶುಕ್ರವಾರ ಪ್ರಸಾರ ಮಾಡಲಾಯಿತು. ಬಳಿಕ ಎಸ್‌ಐ ಸೇರಿದಂತೆ ಐವರನ್ನು ಅಮಾನತು ಮಾಡಲಾಗಿದೆ. ಅಮಾನತಾಗಿರುವ ಎಲ್ಲರೂ ಪೊಲೀಸ್‌ ಹೆಡ್‌ಕ್ವಾರ್ಟರ್ಸ್‌ನಲ್ಲಿಯೇ ವಾಸವಿದ್ದರು. ಅವರ ಹೆಸರುಗಳನ್ನು ಹೇಳಲು ಸಾಧ್ಯವಿಲ್ಲ’ ಎಂದು ದೀಪಕ್‌ ತಿಳಿಸಿದರು.

ಹೆಸರು ಬಹಿರಂಗ ಪಡಿಸದಂತೆ ತಿಳಿಸಿದ ಪೊಲೀಸ್‌ ಅಧಿಕಾರಿಯೊಬ್ಬರು, ‘ಕಾಸ್ಕರ್‌ ತಾನು ಜೈಲಿನಿಂದ ಬೆಳಿಗ್ಗೆ ಹೊರಗೆ ಹೋಗಿ ಸಂಜೆ ಮರಳಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದ’ ಎಂದೂ ಮಾಹಿತಿ ನೀಡಿದರು.

ಠಾಣೆ ಆಯುಕ್ತರ ಕಚೇರಿಯ ಮತ್ತೊಬ್ಬರುಪೊಲಿಸ್‌ ಅಧಿಕಾರಿ, ‘ಅಮಾನತುಗೊಂಡಿರುವ ಎಲ್ಲ ಪೊಲೀಸರ ವಿರುದ್ಧ ಕಾನೂನುರೀತ್ಯ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದಲ್ಲಿ ಇನ್ನೂ ಯಾರಾದರು ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲಾಗುವುದು’ ಎಂದರು.

ಕಾಸ್ಕರ್‌ ಆರೋಗ್ಯ ತಪಾಸಣೆ ನಡೆಸಿದ ಠಾಣೆ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಕೈಲಾಸ್‌ ಪವಾರ್‌, ‘ಹಲ್ಲು ನೋವಿನ ಕಾರಣದಿಂದಾಗಿ ಕಾಸ್ಕರ್‌ನನ್ನು ಗುರುವಾರ ಆಸ್ಪತ್ರೆಗೆ ಕರೆತರಲಾಗಿತ್ತು. ಆತನನ್ನು ದಂತ ವೈದ್ಯಕೀಯ ವಿಭಾಗಕ್ಕೆ ಕಳುಹಿಸಿಕೊಟ್ಟೆವು. ತನ್ನಿಂದ ನೋವು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದ ಆತ, ಕೆಲವು ಹಲ್ಲುಗಳನ್ನು ಕಿತ್ತು ಬೇರೆ ಹಲ್ಲುಗಳನ್ನು ಜೋಡಿಸುವಂತೆ ಮನವಿ ಮಾಡಿಕೊಂಡ. ಕಾಸ್ಕರ್‌ಗೆ ಡಯಾಬಿಟಿಕ್‌ ಇದೆ. ಒಂದು ವೇಳೆ ನಾವು ಶಸ್ತ್ರಚಿಕಿತ್ಸೆ ಮಾಡಿದರೆ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಿದ್ದು, ವರದಿ ಇನ್ನಷ್ಟೇ ಬರಬೇಕಿದೆ ಎಂದು ಮಾಹಿತಿ ನೀಡಿದರು.

ಕಾಸ್ಕರ್‌ ಹಾಗೂ ಆತನ ಇಬ್ಬರು ಸಹಚರರು 2017ರ ಸೆಪ್ಟೆಂಬರ್‌ 18ರಂದು ಸೆರೆ ಸಿಕ್ಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.