ADVERTISEMENT

ಪಂಜಾಬ್: ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ; 5 ಸಾವು

ಪಿಟಿಐ
Published 30 ಮೇ 2025, 9:36 IST
Last Updated 30 ಮೇ 2025, 9:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಂಡೀಗಢ: ಪಂಜಾಬ್‌ನ ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯ ಲಂಬಿ ಬಳಿಯ ಪಟಾಕಿ ತಯಾರಿಕೆ ಮತ್ತು ಪ್ಯಾಕೇಜಿಂಗ್ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಐದು ಜನರು ಸಾವಿಗೀಡಾಗಿದ್ದು, ಸುಮಾರು 30 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಈ ಘಟನೆ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶ್ರೀ ಮುಕ್ತಸರ್ ಸಾಹಿಬ್‌ನ ಸಿಂಘೇವಾಲಾ-ಕೋಟ್ಲಿ ರಸ್ತೆಯಲ್ಲಿರುವ ಎರಡು ಅಂತಸ್ತಿನ ಕಾರ್ಖಾನೆ ಘಟಕದಲ್ಲಿ ಸ್ಫೋಟ ಸಂಭವಿಸಿದೆ ಎಂದು ಲಂಬಿಯ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಜಸ್ಪಾಲ್ ಸಿಂಗ್ ದೂರವಾಣಿ ಮೂಲಕ ತಿಳಿಸಿದ್ದು, ಈ ಘಟಕದಲ್ಲಿ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಗಾಯಾಳುಗಳನ್ನು ಏಮ್ಸ್ ಬಟಿಂಡಾ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಅಪಾಯದಿಂದ ಪಾರಾಗಿದ್ದಾರೆ ಎಂದು ಡಿಎಸ್‌ಪಿ ತಿಳಿಸಿದ್ದಾರೆ. ಸ್ಫೋಟದ ಹಿಂದಿನ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಘಟಕದ ಪಟಾಕಿ ತಯಾರಿಕಾ ಕೇಂದ್ರದ ಒಂದು ಕೋಣೆಯಲ್ಲಿ ಸ್ಫೋಟ ಸಂಭವಿಸಿದ್ದು, ಕಟ್ಟಡದ ಛಾವಣಿ ಮತ್ತು ಇತರ ಭಾಗಗಳು ಕುಸಿದಿವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಖಿಲ್ ಚೌಧರಿ ಹೇಳಿದ್ದಾರೆ.

ಅವಶೇಷಗಳಡಿ ಹಲವು ಮಂದಿ ಸಿಲುಕಿದ್ದು, ಪೊಲೀಸರಿಗೆ ಮಾಹಿತಿ ಬಂದ ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು ಎಂದೂ ಎಸ್‌ಎಸ್‌ಪಿ ಹೇಳಿದ್ದಾರೆ.

ಪಟಾಕಿ ತಯಾರಿಕೆಗೆ ಬಳಸಿದ್ದ ವಸ್ತುಗಳಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ. ತನಿಖೆ ಬಳಿಕ ಕಾರಣ ತಿಳಿದುಬರಲಿದೆ ಎಂದೂ ಅವರು ತಿಳಿಸಿದ್ದಾರೆ.

ಘಟನೆ ನಡೆದ ಸಮಯದಲ್ಲಿ ಘಟಕದಲ್ಲಿ40-50 ಕಾರ್ಮಿಕರಿದ್ದರು ಎಂದು ಡಿಎಸ್‌ಪಿ ಜಸ್ಪಾಲ್ ತಿಳಿಸಿದ್ದಾರೆ.

ಪಟಾಕಿ ಉತ್ಪಾದನಾ ಘಟಕವು ಕಾರ್ಯನಿರ್ವಹಿಸಲು ಅಗತ್ಯವಾದ ಅನುಮತಿಗಳನ್ನು ಹೊಂದಿದೆಯೇ ಎಂದು ಕೇಳಿದಾಗ, ಈ ಸಂಬಂಧ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.