ADVERTISEMENT

ಅಗತ್ಯಬಿದ್ದರೆ 50 ಲಕ್ಷ ಮುಸ್ಲಿಂ ನುಸುಳುಕೋರರನ್ನು ಓಡಿಸಲಾಗುತ್ತದೆ: ದಿಲೀಪ್ ಘೋಷ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 3:12 IST
Last Updated 20 ಜನವರಿ 2020, 3:12 IST
ಬಿಜೆಪಿ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್
ಬಿಜೆಪಿ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್   

ಕೋಲ್ಕತಾ: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.50 ಲಕ್ಷ ಮುಸ್ಲಿಂ ನುಸುಳುಕೋರರನ್ನು ಗುರುತಿಸಿ ಅಗತ್ಯವಿದ್ದರೆ 'ದೇಶದಿಂದ ಓಡಿಸಲಾಗುವುದು' ಎಂದು ಹೇಳಿದ್ದಾರೆ.

ಖರಗ್‌ಪುರದ ಸಂಸದರಾಗಿರುವ ದಿಲೀಪ್ ಘೋಷ್ ಅವರು, ಪೌರತ್ವ ತಿದ್ದುಪಡಿ ಕಾಯಿದೆ ಪರವಾಗಿ ಉತ್ತರ 24 ಪರಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಕಿಡಿಕಾರಿದ ಅವರು, 50 ಲಕ್ಷ ಮುಸ್ಲಿಂ ಒಳನುಸುಳುಕೋರರನ್ನು ಗುರುತಿಸಲಾಗುವುದು, ಅಗತ್ಯ ಬಿದ್ದರೆ ಅವರನ್ನೆಲ್ಲ ಭಾರತದಿಂದ ಓಡಿಸಲಾಗುವುದು. ಮೊದಲಿಗೆ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗುವುದು ಬಳಿಕ ದೀದಿ(ಮಮತಾ ಬ್ಯಾನರ್ಜಿ) ಯಾರೊಬ್ಬರನ್ನು ಸಮಾಧಾನ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ADVERTISEMENT

ಸಿಎಎ ವಿರೋಧಿ ಪ್ರತಿಭಟನೆ ವೇಳೆ ಯಾರು ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಸುಟ್ಟುಹಾಕುತ್ತಾರೋ ಅಂತಹ ಪ್ರತಿಭಟನಾಕಾರರನ್ನು ನಾಯಿಗಳಂತೆ ಸುಟ್ಟು ಹಾಕಬೇಕು ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.

ಅವರು ನಾಶಪಡಿಸುತ್ತಿರುವ ಸಾರ್ವಜನಿಕ ಆಸ್ತಿ ಅವರ ಅಪ್ಪನಿಗೆ ಸೇರಿದೆ ಎಂದು ಅವರು ಭಾವಿಸುತ್ತಿದ್ದಾರೆಯೇ? ಸಾರ್ವಜನಿಕ ಆಸ್ತಿಯು ತೆರಿಗೆದಾರರಿಗೆ ಸೇರಿದ್ದು. ಈ ಬಗ್ಗೆ ಮಮತಾ ಏನನ್ನೂ ಹೇಳಲಿಲ್ಲ. ಏಕೆಂದರೆ ಅವರು ಅವರ ಮತದಾರರು. ಅಸ್ಸಾಂ ಮತ್ತು ಉತ್ತರಪ್ರದೇಶದಲ್ಲಿ ನಮ್ಮ ಸರ್ಕಾರ ಇಂತಹವರನ್ನು ನಾಯಿಗಳಂತೆ ಹೊಡೆದುರುಳಿಸಿದೆ. ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಪ್ರತಿಭಟನೆ ವೇಳೆ ಉತ್ತರ ಪ್ರದೇಶ, ಅಸ್ಸಾಂ ಮತ್ತು ಕರ್ನಾಟಕ ಸರ್ಕಾರಗಳು ಇಂತಹ ರಾಷ್ಟ್ರ ವಿರೋಧಿ ಅಂಶಗಳ ಮೇಲೆ ಗುಂಡು ಹಾರಿಸುವ ಮೂಲಕ ಸರಿಯಾದ ಕೆಲಸವನ್ನೇ ಮಾಡಿವೆ ಎಂದು ಹೇಳಿದ್ದರು.

ಯಾರು ಸಾರ್ವಜನಿಕ ಆಸ್ತಿಗಳನ್ನು ಧ್ವಂಸ ಮಾಡುತ್ತಾರೋ ಅಂತವರನ್ನು ಗುಂಡಿಕ್ಕಿ ಕೊಲ್ಲಬೇಕು. ಹೀಗೆಂದು ನಾನು ಭಾಷಣದಲ್ಲಿ ಹೇಳಿದ್ದೆ. ವಿರೋಧ ಪಕ್ಷಗಳು ಈ ಬಗ್ಗೆ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿದ್ದಾರೆ. ಈಗಲೂ ನಾನು ಅದನ್ನೇ ಪುನರಾವರ್ತಿಸುತ್ತೇನೆ. ಸಾರ್ವಜನಿಕ ಆಸ್ತಿಯನ್ನು ಧ್ವಂಸ ಮಾಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದರು.

ಸಾರ್ವಜನಿಕ ಆಸ್ತಿಯನ್ನು ಧ್ವಂಸ ಮಾಡುವ ಈ ಒಳನುಸುಳಿರುವವರನ್ನು ಏನು ಮಾಡಬೇಕು? ಅವರಿಗೆ ಪ್ರಸಾದ ನೀಡಬೇಕೇ? ಸಾರ್ವಜನಿಕ ಆಸ್ತಿಯನ್ನು ಧ್ವಂಸ ಮಾಡಿದವರನ್ನು ಗುರುತಿಸಲಾಗುತ್ತದೆ. ಮೊದಲಿಗೆ ಅವರಿಗೆ ಗುಂಡಿಕ್ಕಿ ನಂತರ ಬಾಂಬ್‌ ಸ್ಫೋಟಿಸಲಾಗುತ್ತದೆ. ಯಾರನ್ನೂ ಬಿಡಲಾಗುವುದಿಲ್ಲ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.