ADVERTISEMENT

ಕೋವಿಡ್: ದೇಶದಲ್ಲಿ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆ, ಪರೀಕ್ಷೆಗೆ 52 ಪ್ರಯೋಗಾಲಯ

ಯೋಗಾಲಯಗಳಲ್ಲಿ 4,058 ಮಾದರಿ ಪರೀಕ್ಷೆ

ಪಿಟಿಐ
Published 7 ಮಾರ್ಚ್ 2020, 20:00 IST
Last Updated 7 ಮಾರ್ಚ್ 2020, 20:00 IST
ಆರೋಗ್ಯ ಇಲಾಖೆ ಅಧಿಕಾರಿಗಳು ಅಸ್ಸಾಂನ ದಿಬ್ರುಗಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸಿದರು –ಪಿಟಿಐ ಚಿತ್ರ
ಆರೋಗ್ಯ ಇಲಾಖೆ ಅಧಿಕಾರಿಗಳು ಅಸ್ಸಾಂನ ದಿಬ್ರುಗಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ದೇಶದಲ್ಲಿ ಇನ್ನೂ ಮೂವರು ಕೋವಿಡ್‌–19 ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 34ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

ಈ ನಡುವೆ, ಕೇಂದ್ರದ ಆರೋಗ್ಯ ಸಚಿವಾಲಯವು ಶಂಕಿತ ಸೋಂಕು ಪೀಡಿತರ ಮಾದರಿಗಳ ಪರೀಕ್ಷೆಗಾಗಿ 52 ಕಡೆ ಪ್ರಯೋಗಾಲಯಗಳನ್ನು ಸ್ಥಾಪಿಸಿದೆ. ಹೊಸದಾಗಿ ಸೋಂಕು ಪತ್ತೆಯಾದ ಮೂವರಲ್ಲಿ ಇಬ್ಬರು ಲಡಾಖ್‌ನವರು. ಇವರು ಇತ್ತೀಚೆಗೆ ಇರಾನ್‌ ಪ್ರವಾಸ ಕೈಗೊಂಡಿದ್ದರು. ಇನ್ನೊಬ್ಬ ವ್ಯಕ್ತಿ ತಮಿಳುನಾಡಿನವರಾಗಿದ್ದು, ಇತ್ತೀಚೆಗೆ ಒಮಾನ್‌ಗೆ ಹೋಗಿ ಬಂದಿದ್ದರು. ಮೂವರ ಸ್ಥಿತಿ ಸ್ಥಿರವಾಗಿದೆ ಎಂದು ಇಲಾಖೆ ಹೇಳಿದೆ.

ದೇಶದ ವಿವಿಧ ಪ್ರಯೋಗಾಲಯಗಳಲ್ಲಿ ಶುಕ್ರವಾರದವರೆಗೆ (ಮಾ.6) ಒಟ್ಟು 3,404 ಜನರಿಂದ ಸಂಗ್ರಹಿಸಿದ್ದ 4,058 ಮಾದರಿಗಳನ್ನು ಪರೀಕ್ಷೀಸಲಾಗಿದೆ. ಇವರಲ್ಲಿ ವುಹಾನ್‌ನಿಂದ ಕರೆತರಲಾಗಿದ್ದ 654 ಜನರ 1,308 ಮಾದರಿಗಳು ಸೇರಿದ್ದವು ಎಂದು ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಎಚ್ಚರಿಕೆ: ಸೋಂಕು ಭೀತಿಯಕಾರಣಕ್ಕೆ ಮುಖಗವಸುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಎಚ್ಚರಿಕೆ ನೀಡಿದ್ದಾರೆ.

ವಿವಿಧ ರಾಜ್ಯಗಳ ಆರೋಗ್ಯ ಸಚಿವರ ಜತೆ ವಿಡಿಯೊ ಸಂವಾದ ನಡೆಸಿದ ಅವರು, ಸೋಂಕಿನ ಕುರಿತು ಜಾಗೃತಿ ಮೂಡಿಸಲು ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಸೂಚಿಸಿದರು.

ಇರಾನ್‌ನಿಂದ ಶಂಕಿತರ ಮಾದರಿ: ಈ ಮಧ್ಯೆ, ಇರಾನ್‌ನಲ್ಲಿ ಇರುವ, ಸೋಂಕು ತಗುಲಿರಬಹುದು ಎಂದು ಶಂಕಿಸಲಾದ 300 ಮಂದಿ ಭಾರತೀಯರ ಮಾದರಿಗಳನ್ನು ಟೆಹ್ರಾನ್‌ನಿಂದ ವಿಮಾನದ ಮೂಲಕ ತರಲಾಗಿದ್ದು, ಅವುಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.‌ ಸೋಂಕು ಇಲ್ಲ ಎಂದು ದೃಢಪಟ್ಟ ಬಳಿಕ ದೇಶಕ್ಕೆ ಮರಳಲು ಅವರಿಗೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸಿ ಹಡಗುಗಳಿಗೆ ತಡೆ (ಮಂಗಳೂರು ವರದಿ): ‘ಕೋವಿಡ್‌ 19’ ಹರಡುವ ಆತಂಕದ ಹಿನ್ನೆಲೆಯಲ್ಲಿ ದೇಶದ ಎಲ್ಲ ಬಂದರುಗಳಿಗೆ ಪ್ರವಾಸಿ ಹಡಗುಗಳ ಭೇಟಿಯನ್ನು ಇದೇ 31 ರವರೆಗೆ ರದ್ದುಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಅನ್ವಯ ನಗರದ ಎನ್‌ಎಂಪಿಟಿಗೆ ಬರಬೇಕಿದ್ದ ಪ್ರವಾಸಿ ಹಡಗುಗಳ ಭೇಟಿಗೆ ತಡೆ ನೀಡಲಾಗಿದೆ.

ಶನಿವಾರ ಎನ್‌ಎಂಪಿಟಿಯಲ್ಲಿ ವಿದೇಶಿ ಪ್ರವಾಸಿ ಹಡಗು ಎಂಎಸ್ಸಿ ಲಿರಿಕಾಗೆ ಪ್ರವೇಶ ನಿರಾಕರಿಸಲಾಗಿದೆ. ಇದರಿಂದಾಗಿ ಶನಿವಾರ ಮೂಡುಬಿದಿರೆಗೆ ಭೇಟಿ ನೀಡಲಿದ್ದ ವಿದೇಶಿ ಯಾತ್ರಿಕರ ಕಾರ್ಯಕ್ರಮವನ್ನು ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸೂಚನೆಯಂತೆ ಮುಂದೂಡಲಾಗಿದೆ.

ಪ್ರತಿ ವರ್ಷ ಮಾರ್ಚ್‌ನಿಂದ ಮೇ ವರೆಗೆ ವಿಶ್ವದೆಲ್ಲೆಡೆಯಿಂದ ಯಾತ್ರಿಕರು ಮೂಡುಬಿದಿರೆ ಜೈನಮಠಕ್ಕೆ ಭೇಟಿ ನೀಡುತ್ತಿದ್ದರು. ಶನಿವಾರ
ಜೈನಮಠ ಭೇಟಿಯನ್ನು ಮುಂದೂಡುವಂತೆ ಸ್ವಾಮೀಜಿ ತಿಳಿಸಿದ್ದಾರೆ ಎಂದು ಜೈನಮಠದ ಪ್ರಕಟಣೆ ತಿಳಿಸಿದೆ.

ಕೋವಿಡ್‌ 19 ಜಾಗೃತಿಗೆ ಸರ್ಕಾರ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮವನ್ನು ಸ್ವಾಮೀಜಿ ಸ್ವಾಗತಿಸಿದ್ದಾರೆ.

ರಾಜ್ಯದಲ್ಲಿ ಐದು ಪ್ರಯೋಗಾಲಯ
ಸೋಂಕು ಮಾದರಿ ಪರೀಕ್ಷೆಗೆ ಕರ್ನಾಟಕದಲ್ಲಿ ಐದು ಕಡೆ ಅಧಿಕೃತವಾಗಿ ಪ್ರಯೋಗಾಲಯ ಸೌಲಭ್ಯ ಕಲ್ಪಿಸಲಾಗಿದೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ರಾಷ್ಟ್ರೀಯ ರೋಗಸೂಕ್ಷ್ಮಾಣುಗಳ ಅಧ್ಯಯನ ಸಂಸ್ಥೆಯ ಘಟಕ, ಬೆಂಗಳೂರು. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಪರೀಕ್ಷಾ ವ್ಯವಸ್ಥೆ ಮಾಡಲಾಗಿದೆ.

ಮಾಸ್ಕ್‌ಗಳ ಸಂಗ್ರಹಕ್ಕೆ ಸೂಚನೆ
ಬೆಂಗಳೂರು:‘ಸೋಂಕಿನ ಭೀತಿ ಹಿನ್ನೆಲೆಯಲ್ಲಿವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸ್ವಾಯತ್ತ ಸಂಸ್ಥೆಗಳು, ಆಸ್ಪತ್ರೆಗಳು ಕನಿಷ್ಠ 3 ತಿಂಗಳಿಗೆ ಸಾಕಾಗುವಷ್ಟು ಮುಖಗವಸುಗಳು (ಮಾಸ್ಕ್‌) ಹಾಗೂ ಸುರಕ್ಷಾ ಸಾಧನಗಳು ಲಭ್ಯವಿರುವಂತೆ ಕ್ರಮವಹಿಸಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸುತ್ತೋಲೆ ಹೊರಡಿಸಿದ್ದಾರೆ.

ಆರು ತಿಂಗಳಿಗೆ ಸಾಕಾಗುವಷ್ಟು ಔಷಧಿಗಳನ್ನೂ ಸಂಗ್ರಹಿಸಿಟ್ಟುಕೊಳ್ಳಬೇಕು. ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಅನುಸಾರ ಪ್ರತ್ಯೇಕ ವಾರ್ಡ್‌ಗಳಲ್ಲಿ 10 ಹಾಸಿಗೆಗಳನ್ನು ಮೀಸಲಿಡಬೇಕು. ಅಲ್ಲಿ ವೆಂಟಿಲೇಟರ್ ಸೇರಿದಂತೆ ಅಗತ್ಯ ಸೌಲಭ್ಯ ಇರಬೇಕು ಎಂದು ತಿಳಿಸಲಾಗಿದೆ.

‘ಬಯೊಮೆಟ್ರಿಕ್‌ ಬಳಸದಂತೆ ಸೂಚನೆ’
ಮೈಸೂರು: ‘ಕೋವಿಡ್‌ –19’ ವೈರಸ್‌ ಸೋಂಕು ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಬಯೊಮೆಟ್ರಿಕ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಕೈಬಿಡುವಂತೆ ಸೂಚನೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಶನಿವಾರ ಇಲ್ಲಿ ತಿಳಿಸಿದರು.

ರಾಜ್ಯದಲ್ಲಿ ಇದುವರೆಗೂ ಈ ವೈರಸ್ ಸೋಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ. ಆದರೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತಿ ಜಿಲ್ಲೆಯಲ್ಲಿ ತಾಲ್ಲೂಕುಮಟ್ಟದಲ್ಲಿ ರೋಗ ಪತ್ತೆ ಸಮಿತಿ ಮಾಡಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ರಕ್ತ ಪರೀಕ್ಷೆ ಕೇಂದ್ರಗಳನ್ನು ತೆರಯಲಾಗಿದೆ. 2,500 ಹಾಸಿಗೆಗಳನ್ನು ಸಿದ್ಧ ಇರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.