ADVERTISEMENT

ಚಂಡೀಗಢದ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ವ ಧರ್ಮ ಪ್ರಾರ್ಥನೆಗಾಗಿ ಪ್ರಾರ್ಥನಾ ಕೋಣೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 6:00 IST
Last Updated 6 ಜನವರಿ 2018, 6:00 IST
ಕೃಪೆ: ವಿಕಿ ಮೀಡಿಯಾ
ಕೃಪೆ: ವಿಕಿ ಮೀಡಿಯಾ   

ಚಂಡೀಗಢ:  ಇಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಧರ್ಮದವರಿಗಾಗಿ ಒಂದೇ ಒಂದು ಪ್ರಾರ್ಥನಾ ಕೋಣೆ ಇದೆ. ಎಲ್ಲ  ಧರ್ಮದವರಿಗೂ ದೇವರು ಒಬ್ಬನೇ ಎಂದು ಸಂದೇಶ ಸಾರುವುದಕ್ಕಾಗಿ ಆಸ್ಪತ್ರೆಯಲ್ಲಿ ಈ ರೀತಿ ಪ್ರಾರ್ಥನಾ ಕೋಣೆ ನಿರ್ಮಿಸಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಕುಟುಂಬದವರು ಇಲ್ಲಿ ಒಟ್ಟಾಗಿ ಪ್ರಾರ್ಥಿಸುತ್ತಾರೆ.

ಚಂಡೀಗಢದಲ್ಲಿ  ಈ ರೀತಿ ಸೌಕರ್ಯ ಒದಗಿಸಿದ ಮೊದಲ ಆಸ್ಪತ್ರೆಯಾಗಿದೆ ಈ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ. ಆಸ್ಪತ್ರೆಯ ಸಿ ಬ್ಲಾಕ್‍ ನಲ್ಲಿ ಈ ಪ್ರಾರ್ಥನಾ ಕೋಣೆ ಇದ್ದು, ಇದರ ಪಕ್ಕದಲ್ಲೇ 10ಕ್ಕಿಂತ ಹೆಚ್ಚು ಆಪರೇಷನ್ ಥಿಯೇಟರ್‍‍ಗಳಿವೆ. ಈ ಕೋಣೆಯಲ್ಲಿ ಎಲ್ಲ ಧರ್ಮದವರ ಧಾರ್ಮಿಕ ಚಿಹ್ನೆಗಳನ್ನು ಇರಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಬಂಧುಗಳಿಗೆ ಪ್ರಾರ್ಥನೆ ಸಲ್ಲಿಸಲು ಬೇಕಾದ ಸೌಕರ್ಯ ಇಲ್ಲಿದೆ.
ನಾನು ಬೆಳಗ್ಗೆ ಪ್ರಾರ್ಥನೆ ಸಲ್ಲಿಸುವಾಗ, ನನ್ನ ಪಕ್ಕದಲ್ಲೇ ಮುಸ್ಲಿಂ ವ್ಯಕ್ತಿಯೊಬ್ಬರು ಪ್ರಾರ್ಥನೆ ಸಲ್ಲಿಸುತ್ತಾರೆ. ಎಲ್ಲ ಧರ್ಮದವರು ಇಲ್ಲಿ ಜತೆಯಾಗಿ ಪ್ರಾರ್ಥಿಸುವುದರಿಂದ ಮನಸ್ಸಿಗೆ ಸಮಾಧಾನವೂ ಸಿಗುತ್ತದೆ ಎಂದು ಪಂಜಾಬ್‍ ಮೂಲದ ಬಲ್ಜಿಂದರ್ ಸಿಂಗ್ ಹೇಳಿದ್ದಾರೆ. ಈ ರೀತಿಯ ಸೌಕರ್ಯವನ್ನೊದಗಿಸಿ ಆಸ್ಪತ್ರೆಯ ಆಡಳಿತ ಸಂಸ್ಥೆ ಒಳ್ಳೆಯ ಕೆಲಸ ಮಾಡಿದೆ ಅಂತಾರೆ ಅವರು, ಬಲ್ಜಿಂದರ್ ಅವರ ಬಂಧುವೊಬ್ಬರು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಷ್ಟದ ಹೊತ್ತಿನಲ್ಲಿ ಎಲ್ಲರೂ ಪ್ರಾರ್ಥಿಸಲು ಬಯಸುತ್ತಾರೆ. ಆ ಹೊತ್ತಿಗೆ ಯಾರೊಬ್ಬರೂ ಧರ್ಮ ಭೇದ ತೋರುವುದಿಲ್ಲ. ಹೀಗೊಂದು ವ್ಯವಸ್ಥೆ ಕಲ್ಪಿಸಿರುವುದರಿಂದ ನಾವೆಲ್ಲರೂ ಪರಸ್ಪರ ಬೇಕಾದವರು ಎಂಬುದು ಅನುಭವಕ್ಕೆ ಬರುತ್ತದೆ ಅಂತಾರೆ ಶಹರನ್‍ಪುರ್ ನಿವಾಸಿ ಮೊಹಮ್ಮದ್ ಅಫ್ರಜುಲ್.
ಈ ಪ್ರಾರ್ಥನಾ ಕೋಣೆಯಲ್ಲಿ ಮೇಜಿನ ಮೇಲೊಂದು ದೀಪ ಬೆಳಗುತ್ತದೆ. ಅಲ್ಲಿಯೇ ವಿವಿಧ ಧರ್ಮಗಳ ಧಾರ್ಮಿಕ ಚಿಹ್ನೆಗಳಿವೆ. ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಇಲ್ಲಿ ಪ್ರಾರ್ಥನೆ ಮಾಡುವವರ ಸಂಖ್ಯೆ ಜಾಸ್ತಿ ಇರುತ್ತದೆ. ರೋಗ ಗುಣವಾಗಲು ಮೆಡಿಕಲ್ ಸಯನ್ಸ್ ಮತ್ತು ವೈದ್ಯರ ಚಿಕಿತ್ಸೆ ಜತೆಗೆ ದೇವರ ಮೇಲಿನ ನಂಬಿಕೆಯೂ ಬೇಕು ಎಂಬುದನ್ನು ಜನರು ನಂಬುತ್ತಾರೆ.

ADVERTISEMENT

ಆಪರೇಷನ್ ಥಿಯೇಟರ್ ಬಳಿಯಲ್ಲಿ ರೋಗಿಯ ಕುಟುಂಬದವರು ಪ್ರಾರ್ಥಿಸುತ್ತಿರುವುದನ್ನು ನೋಡಿ ಆಸ್ಪತ್ರೆಯಲ್ಲಿ ಪ್ರಾರ್ಥನಾ ಕೋಣೆಯೊಂದನ್ನು ನಿರ್ಮಿಸುವ  ಬಗ್ಗೆ ಯೋಚಿಸಿದ್ದೆ ಅಂತಾರೆ ಇಲ್ಲಿನ ಮೆಡಿಕಲ್ ಸುಪರಿಟೆಂಡೆಂಟ್  ಡಾ. ರವಿ ಗುಪ್ತಾ. ಈ ಹಿಂದೆ ಇಲ್ಲಿ ಪಾರ್ಥನೆಗೆ ಸ್ಥಳವಿರಲಿಲ್ಲ. ಪ್ರಾರ್ಥನಾ ಕೋಣೆ ನಿರ್ಮಿಸಿದ ನಂತರ ಎಲ್ಲರೂ ಇಲ್ಲಿಯೇ ಪ್ರಾರ್ಥಿಸುತ್ತಾರೆ ಎಂದು ಡಾ. ಗುಪ್ತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.