ADVERTISEMENT

ಆರ್ಥಿಕ ಸಮೀಕ್ಷೆ: ಪ್ರಗತಿಗೆ ತೈಲ ದರ ಏರಿಕೆ ಭೀತಿ

ಈ ವರ್ಷದ ಅಭಿವೃದ್ಧಿ ದರ ಶೇ 6.75 ಮುಂದಿನ ವರ್ಷ ಶೇ 7.5ರ ಅಂದಾಜು

ಪಿಟಿಐ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST
ಆರ್ಥಿಕ ಸಮೀಕ್ಷೆ: ಪ್ರಗತಿಗೆ ತೈಲ ದರ ಏರಿಕೆ ಭೀತಿ
ಆರ್ಥಿಕ ಸಮೀಕ್ಷೆ: ಪ್ರಗತಿಗೆ ತೈಲ ದರ ಏರಿಕೆ ಭೀತಿ   

ನವದೆಹಲಿ: ನೋಟು ರದ್ದತಿ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯ ಪರಿಣಾಮಗಳು ತಗ್ಗಿವೆ. ಹಾಗಾಗಿ 2018-19ನೇ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ದೇಶೀ ಉತ್ಪನ್ನವು ಶೇ 7ರಿಂದ ಶೇ 7.5ರ ದರದಲ್ಲಿ ಏರಿಕೆಯಾಗಬಹುದು ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ.

ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಇದೇ ರೀತಿಯ ಮುಂದುವರಿದರೆ ಭಾರತದ ಪ್ರಗತಿಗೆ ದೊಡ್ಡ ತೊಡಕಾಗ
ಬಹುದು. ಹಾಗೆಯೇ ಷೇರುಪೇಟೆಯ ದಿಢೀರ್‌ ಕುಸಿತವೂ ಅಭಿವೃದ್ಧಿಯನ್ನು ಕಾಡಬಹುದು. ಹಾಗಾಗಿ ಇಂತಹ ಸಂದರ್ಭವನ್ನು ಸರ್ಕಾರವು ಹದ್ದಿನ ಕಣ್ಣಿಟ್ಟು ಕಾಯಬೇಕು ಎಂದು ಎಚ್ಚರಿಸಿದೆ.

ಈಗಾಗಲೇ ಕೈಗೊಂಡಿರುವ ಸುಧಾರಣಾ ಕ್ರಮಗಳನ್ನು ಸಮನ್ವಯಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಜಿಎಸ್‌ಟಿ ಜಾರಿ ಸುಸ್ಥಿರಗೊಂಡು ರಫ್ತುದಾರರು ಎದುರಿಸುತ್ತಿರುವ ಅಸ್ಥಿರತೆ ಕೊನೆಗೊಳ್ಳಬೇಕು; ತೆರಿಗೆ ನೆಲೆ ವಿಸ್ತರಿಸಬೇಕು ಮತ್ತು ತೆರಿಗೆ ಪಾವತಿ ಸರಳಗೊಳಿಸಬೇಕು ಎಂದು ಸಲಹೆ ನೀಡಿದೆ. ಇದರ ಜತೆಗೆ, ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆ ಏರ್‌ ಇಂಡಿಯಾವನ್ನು ಖಾಸಗೀಕರಣಗೊಳಿಸಬೇಕು ಎಂದು ಬಲವಾಗಿ ಪ್ರತಿಪಾದಿಸಿದೆ.

ADVERTISEMENT

ಸಂಸತ್ತಿನ ಬಜೆಟ್‌ ಅಧಿವೇಶನದ ಆರಂಭದ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮಾತನಾಡಿದರು. ಅದರ ಬಳಿಕ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು 2017–18ರ ಆರ್ಥಿಕ ಸಮೀಕ್ಷೆ ಮಂಡಿಸಿದರು.

‘ಈಗ ಸರ್ಕಾರ ಹೊಸದಾಗಿ ಆಥವಾ ಆಮೂಲಾಗ್ರವಾಗಿ ಮಾಡುವಂತಹುದೇನೂ ಇಲ್ಲ. ಈಗಾಗಲೇ ಆರಂಭಿಸಿರುವ ಸುಧಾರಣಾ ಕ್ರಮಗಳನ್ನು ಪೂರ್ಣಗೊಳಿಸಿದರೆ ಸಾಕು. ಈ ಸರ್ಕಾರಕ್ಕೆ ಪೂರ್ಣಗೊಳಿಸಲು ಮಹತ್ವಾಕಾಂಕ್ಷಿ ಕಾರ್ಯಸೂಚಿ ಇದೆ’ ಎಂದು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ, ಆರ್ಥಿಕ ಸಮೀಕ್ಷೆ ಸಿದ್ಧಪಡಿಸಿದ ಅರವಿಂದ ಸುಬ್ರಮಣಿಯನ್‌ ಹೇಳಿದ್ದಾರೆ.

ಒಂದು ವರ್ಷದಲ್ಲಿ, ಜಗತ್ತಿನ ವಿವಿಧ ದೇಶಗಳು ಹೆಚ್ಚಿನ ಪ್ರಗತಿ ದಾಖಲಿಸುತ್ತಿದ್ದಾಗ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಳ್ಳಲು ನೋಟು ರದ್ದತಿ ಮತ್ತು ಜಿಎಸ್‌ಟಿಯ ಪರಿಣಾಮವೇ ಕಾರಣ. ಆದರೆ, ಈ ಪರಿಣಾಮ ತಾತ್ಕಾಲಿಕ. ಹಾಗಾಗಿ ಈ ಎರಡರ ಪರಿಣಾಮ ಈಗ ತಗ್ಗಿದೆ ಎಂದು ಹೇಳಿದ್ದಾರೆ.

ಕಚ್ಚಾ ತೈಲ ದರ ಏರಿಕೆ ಬೆದರಿಕೆ: 2018–19ರಲ್ಲಿ ಕಚ್ಚಾ ತೈಲ ಬೆಲೆ ಶೇ 12ರಷ್ಟು ಏರಿಕೆಯಾಗಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ಅಂದಾಜಿಸಿದೆ. ಹೀಗಾದರೆ ಅದು ಆದಾಯ ಮತ್ತು ಜನರು ಮಾಡುವ ಖರ್ಚನ್ನು ಕುಗ್ಗಿಸುತ್ತದೆ ಎಂದು ಸಮೀಕ್ಷೆ ಹೇಳಿದೆ.

ಕಚ್ಚಾ ತೈಲ ದರ 10 ಡಾಲರ್‌ (ಸುಮಾರು ₹650) ಏರಿಕೆಯಾದರೆ ಜಿಡಿಪಿ ಶೇ 0.2ರಿಂದ ಶೇ 0.3 ಕುಸಿಯುತ್ತದೆ. ಚಾಲ್ತಿ ಖಾತೆ ಕೊರತೆ
ಶೇ 0.4 ಅಗುತ್ತದೆ. ಹಣದುಬ್ಬರ ಹೆಚ್ಚುತ್ತದೆ. ಈ ಲೆಕ್ಕಾಚಾರದಲ್ಲಿಯೇ ಕಚ್ಚಾ ತೈಲ ಬೆಲೆಯ ಮೇಲೆ ನಿಗಾ ಇರಿಸುವುದು ಬಹಳ ಅಗತ್ಯ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಹಾಗಾಗಿಯೇ, ಕಚ್ಚಾ ತೈಲ ಬೆಲೆ ಏರಿಕೆಯಾದರೆ ಭಾರತದ ಆರ್ಥಿಕ ಪುನಶ್ಚೇತನಕ್ಕೆ ಅಪಾಯ ಎದುರಾಗಬಹುದು ಎಂದು ಸುಬ್ರಮಣಿಯನ್‌ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.