ADVERTISEMENT

ವಿರೋಧ ಪಕ್ಷಗಳ ಪ್ರತಿಭಟನೆ: ಕಲಾಪ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 19:30 IST
Last Updated 5 ಫೆಬ್ರುವರಿ 2018, 19:30 IST

ನವದೆಹಲಿ: ರಾಜ್ಯಸಭಾ ಕಲಾಪ ಆರಂಭವಾಗುತ್ತಿದ್ದಂತೆಯೇ ಸಮಾಜವಾದಿ ಪಕ್ಷ, ಎಎಪಿ, ಕಾಂಗ್ರೆಸ್‌ ಸಂಸದರು ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಸಭಾಪತಿ ಪೀಠದ ಎದುರು ನುಗ್ಗಿ ಪ್ರತಿಭಟನೆ ನಡೆಸಿದರು.

ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಕಲಾಪಗಳನ್ನು ಮಧ್ಯಾಹ್ನ ಎರಡು ಗಂಟೆಗೆ ಮುಂದೂಡಿದರು.

ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ ನಡೆದ ಪೊಲೀಸ್‌ ಎನ್‌ಕೌಂಟರ್‌ ಹತ್ಯೆಗಳ ವಿರುದ್ಧ ಸಮಾಜವಾದಿ ಪಕ್ಷದ ಸಂಸದರು ಘೋಷಣೆ ಕೂಗುತ್ತ ಧರಣಿ ಕುಳಿತರು.

ADVERTISEMENT

ದೆಹಲಿಯಲ್ಲಿರುವ ಬಿಜೆಪಿ ನೇತೃತ್ವದ ಮಹಾನಗರ ಪಾಲಿಕೆಗಳ ಅಕ್ರಮ ಆಸ್ತಿ ಮುಟ್ಟುಗೋಲು ಕಾರ್ಯಾಚರಣೆ ವಿರುದ್ಧ ಎಎಪಿ ಸಂಸದರು ಪ್ರತಿಭಟನೆ ನಡೆಸಿದರು.

ಬಜೆಟ್‌ ಅನುದಾನ ಹಂಚಿಕೆಯಲ್ಲಿ ಆಂಧ್ರ ಪ್ರದೇಶಕ್ಕೆ ಅನ್ಯಾಯವಾಗಿದೆ ಎಂದು ಅಲ್ಲಿಯ ಕಾಂಗ್ರೆಸ್‌ ಸಂಸದ ರಾಮಚಂದ್ರ ರಾವ್‌ ಬ್ಯಾನರ್‌ ಹಿಡಿದು ಧರಣಿ ನಡೆಸಿದರು.

ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸಂಸದ ಅಮಿತ್‌ ಶಾ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಮಂಡಿಸಿದರು.

ಬಿಜೆಪಿಗೆ ಸ್ವತಂತ್ರವಾಗಿ ಸರ್ಕಾರ ರಚಿಸಲು ಅಗತ್ಯವಾದ ಬಹುಮತವನ್ನು ದೇಶದ ಜನತೆ ನೀಡಿದರೂ, ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸೇರಿ ಬಿಜೆಪಿ ಸರ್ಕಾರ ರಚಿಸಿದೆ ಎಂದರು.

‘70 ವರ್ಷ ಈ ದೇಶವನ್ನು ಒಂದು ಕುಟುಂಬ ಆಳುತಿತ್ತು. ಇದರಿಂದ  ಭ್ರಮನಿರಸನಗೊಂಡ ಜನರು ಬಿಜೆಪಿಗೆ ಅಧಿಕಾರ ನೀಡಿದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ ಜನರಲ್ಲಿ ಹೊಸ ಹುಮ್ಮಸ್ಸು ಬಂದಿದೆ. ಆಶಾವಾದದ ಮೊಳಕೆ ಚಿಗುರೊಡೆದಿದೆ ಎಂದರು.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.