ADVERTISEMENT

‘ಕೋರ್ಟ್‌ ಕಸದ ತೊಟ್ಟಿಯಲ್ಲ, ಕಸ ಸಂಗ್ರಹ ನ್ಯಾಯಾಧೀಶರ ಕೆಲಸವಲ್ಲ’

845 ಪುಟದ ಪ್ರಮಾಣಪತ್ರ ಕಂಡು ದಂಗು: ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು!

ಪಿಟಿಐ
Published 6 ಫೆಬ್ರುವರಿ 2018, 19:30 IST
Last Updated 6 ಫೆಬ್ರುವರಿ 2018, 19:30 IST
‘ಕೋರ್ಟ್‌ ಕಸದ ತೊಟ್ಟಿಯಲ್ಲ, ಕಸ ಸಂಗ್ರಹ ನ್ಯಾಯಾಧೀಶರ ಕೆಲಸವಲ್ಲ’
‘ಕೋರ್ಟ್‌ ಕಸದ ತೊಟ್ಟಿಯಲ್ಲ, ಕಸ ಸಂಗ್ರಹ ನ್ಯಾಯಾಧೀಶರ ಕೆಲಸವಲ್ಲ’   

ನವದೆಹಲಿ: ‘ಇದ್ದಬದ್ದ ಕಸವನ್ನೆಲ್ಲ ತಂದು ಸುರಿಯಲು ಇದೇನು ಕಸದ ತೊಟ್ಟಿಯೇ? ನಾವು ಕಸ ಸಂಗ್ರಹಿಸುವ ಕೆಲಸ ಮಾಡುತ್ತಿಲ್ಲ...!’

–ಹೀಗಂತ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಮದನ್‌ ಲೋಕೂರ್‌ ಮತ್ತು ದೀಪಕ್‌ ಗುಪ್ತಾ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

ಘನತ್ಯಾಜ್ಯ ನಿರ್ವಹಣೆ ಕುರಿತು ಮಂಗಳವಾರ ಪ್ರಮಾಣಪತ್ರ ಸಲ್ಲಿಸಲು ಮುಂದಾದ ಕೇಂದ್ರ ಸರ್ಕಾರದ ಪರ ವಕೀಲರು, ನ್ಯಾಯಮೂರ್ತಿಗಳ ಅನಿರೀಕ್ಷಿತ ಸಿಟ್ಟನ್ನು ಕಂಡು ಉತ್ತರಿಸಲು ತಡವರಿಸಿದರು.

ADVERTISEMENT

ಘನತ್ಯಾಜ್ಯ ನಿರ್ವಹಣೆ ಕುರಿತು 845 ಪುಟಗಳ ಬೃಹತ್‌ ಪ್ರಮಾಣಪತ್ರ ಕಂಡು ದಂಗಾದ ನ್ಯಾಯಮೂರ್ತಿಗಳು, ‘ಈ ಎಲ್ಲ ದಾಖಲೆಗಳನ್ನೂ ನೀವು ನೋಡಿದ್ದೀರಾ’ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದರು.

ತಡವರಿಸಿದ ವಕೀಲರು: ಇದರಿಂದ ವಿಚಲಿತರಾದ ವಕೀಲರು ಉತ್ತರಿಸಲು ತಡವರಿಸಿದರು. 845 ಪುಟಗಳ ದಾಖಲೆ ಸಲ್ಲಿಸಿದರೂ ಸಂಪೂರ್ಣ ಮಾಹಿತಿ ಇಲ್ಲದ್ದನ್ನು ಕಂಡು ನ್ಯಾಯಮೂರ್ತಿಗಳಾದ ಲೋಕೂರ್‌ ಮತ್ತು ಗುಪ್ತಾ ಸಿಟ್ಟು ನೆತ್ತಿಗೇರಿತು.

‘ಈ ಪ್ರಮಾಣಪತ್ರವನ್ನು ನೀವೇ ಸರಿಯಾಗಿ ನೋಡಿಲ್ಲ. ಇದನ್ನು ನಾವು ನೋಡಬೇಕೆಂದು ಏಕೆ ಬಯಸುತ್ತೀರಿ. ನಮಗೇನು ಬೇರೆ ಕೆಲಸವಿಲ್ಲವೇ? ಈ ಪ್ರಮಾಣಪತ್ರ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ನೀವು ಏನು ಮಾಡುತ್ತಿದ್ದೀರಿ? ನಮ್ಮ ಮೇಲೆ ಪ್ರಭಾವ ಬೀರುವ ಯತ್ನ ಮಾಡುತ್ತಿದ್ದೀರಾ? ಎಲ್ಲ ಕಸ ತಂದು ನಮ್ಮ ಮುಂದೆ ಸುರಿಯುತ್ತಿದ್ದೀರಿ. ನಾವು ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿದಿದ್ದೀರಾ? ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಇಂತಹ ಕೆಲಸವನ್ನು ಮಾಡಬೇಡಿ. ಇದು ಸರಿಯಲ್ಲ’ ಎಂದು ನ್ಯಾಯಮೂರ್ತಿಗಳು ಖಾರವಾಗಿ ಹೇಳಿದರು.

‘ಕಸ ನಿರ್ವಹಣೆ ಸಮಸ್ಯೆ ಬಗ್ಗೆ ಸ್ಪಷ್ಟವಾದ ಅಭಿಪ್ರಾಯ ಇದ್ದರೆ ಮಂಡಿಸಿ. ಅದನ್ನು ಬಿಟ್ಟು ಕಸ ಸುರಿಯಬೇಡಿ’ ಎಂದು ಕಿವಿಮಾತು ಹೇಳಿದರು.

ರಾಜ್ಯಮಟ್ಟದ ಸಲಹಾ ಮಂಡಳಿ ರಚನೆ ಬಗ್ಗೆ 22 ರಾಜ್ಯಗಳು ನೀಡಿದ ಅಂಕಿ–ಅಂಶ, ದಾಖಲೆ ಸೇರಿದಂತೆ ಎಲ್ಲ ವಿವರ ಒಳಗೊಂಡ ಕಾರಣ ಪ್ರಮಾಣಪತ್ರ ಇಷ್ಟು ದೊಡ್ದಾಗಿದೆ ಎಂದು ವಕೀಲರು ಸಮಾಜಾಯಿಷಿ ನೀಡಿದರು.

ಮೂರು ವಾರದೊಳಗೆ ವರದಿ

2016ರ ಘನತ್ಯಾಜ್ಯ ನಿರ್ವಹಣೆ ನಿಯಮಾವಳಿ ಅನುಸಾರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಜ್ಯಮಟ್ಟದ ಸಲಹಾ ಮಂಡಳಿ ರಚಿಸಿವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮೂರು ವಾರದೊಳಗೆ ವರದಿ ಸಲ್ಲಿಸುವಂತೆ ಅವರು ಕೇಂದ್ರ ಸರ್ಕಾರಕ್ಕೆ ಸೂಚಿಸಿದರು.

ಸಲಹಾ ಮಂಡಳಿ ಅಸ್ತಿತ್ವಕ್ಕೆ ಬಂದ ದಿನ, ಮಂಡಳಿಯ ಸದಸ್ಯರ ಹೆಸರು, ಮಂಡಳಿ ನಡೆಸಿದ ಸಭೆಗಳ ವಿವರ ವರದಿಯಲ್ಲಿ ಇರಬೇಕು ಎಂದು ತಾಕೀತು ಮಾಡಿದರು.

ಸ್ವಯಂಪ್ರೇರಿತ ದೂರು

2015ರಲ್ಲಿ ಏಳು ವರ್ಷದ ಬಾಲಕನೊಬ್ಬ ಡೆಂಗಿಯಿಂದ ಮೃತಪಟ್ಟ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್‌ ನೀಡಿತ್ತು.

ಡೆಂಗಿಯಿಂದ ಬಳಲುತ್ತಿದ್ದ ಬಾಲಕನಿಗೆ ಚಿಕಿತ್ಸೆ ನೀಡಲು ಐದು ಆಸ್ಪತ್ರೆಗಳು ನಿರಾಕರಿಸಿದ್ದವು. ನಂತರ ಬಾಲಕ ಸಾವಿಗೀಡಾಗಿದ್ದ. ಇದರಿಂದ ಹತಾಶರಾದ ಆತನ ತಂದೆ, ತಾಯಿ ಆತ್ಮಹತ್ಯೆಗೆ ಶರಣಾಗಿದ್ದರು.

ಎಲ್ಲರ ಮನಕಲಕಿದ್ದ ಈ ಘಟನೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದವು. ಸಮರ್ಪಕವಾಗಿ ಕಸ ನಿರ್ವಹಣೆ ಮಾಡದ ಕಾರಣ ಡೆಂಗಿ ಮತ್ತು ಚಿಕುನ್‌ಗುನ್ಯಾದಂತಹ ರೋಗ ಹರಡುತ್ತಿವೆ ಎಂದು ಆಕ್ರೋಶ ವ್ಯಕ್ತವಾಗಿತ್ತು.

ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್‌, ಘನತ್ಯಾಜ್ಯ ನಿರ್ವಹಣೆಯ ಸ್ಥಿತಿಗತಿ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು.

ಡೆಂಗಿ ಮತ್ತು ಚಿಕುನ್‌ಗುನ್ಯಾ ಹಲವು ಅಮಾಯಕರ ಜೀವ ಬಲಿಪಡೆಯುತ್ತಿವೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.