
ನವದೆಹಲಿ: ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಯತ್ನಿಸುತ್ತಿರುವ ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆ ನಡೆಯನ್ನು 56 ನಿವೃತ್ತ ನ್ಯಾಯಮೂರ್ತಿಗಳು ಶುಕ್ರವಾರ ಖಂಡಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಇದು ನ್ಯಾಯಮೂರ್ತಿಗಳನ್ನು ಬೆದರಿಸುವ ಪ್ರಯತ್ನ’ ಎಂದು ಟೀಕಿಸಿದ್ದಾರೆ.
ಮದುರೈ ಬಳಿಯ ತಿರುಪರನ್‌ಕುಂಡ್ರಂ ಬೆಟ್ಟದ ಮೇಲಿರುವ ಅರುಳ್‌ಮಿಗು ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ದೀಪ ಬೆಳಗಿಸಲು ಅವಕಾಶ ನೀಡಿ ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠದ ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ಆದೇಶಿಸಿದ್ದರು.
‘ಕಾರ್ತಿಕ ದೀಪ ಬೆಳಗುವುದರಿಂದ, ಬೆಟ್ಟದಲ್ಲಿಯೇ ಇರುವ ದರ್ಗಾ ಅನುಯಾಯಿಗಳ ಅಥವಾ ಮುಸ್ಲಿಂ ಸಮುದಾಯದ ಹಕ್ಕುಗಳಿಗೆ ಚ್ಯುತಿ ಉಂಟಾಗುವುದಿಲ್ಲ’ ಎಂದೂ ಹೇಳಿದ್ದರು.
ನ್ಯಾಯಮೂರ್ತಿ ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಲೋಕಸಭೆ ಸ್ಪೀಕರ್‌ಗೆ ಮಂಗಳವಾರ ನೋಟಿಸ್ ಸಲ್ಲಿಸಿದ್ದಾರೆ.
‘ಸಮಾಜದ ನಿರ್ದಿಷ್ಟ ವರ್ಗದ ಸೈದ್ಧಾಂತಿಕ ಮತ್ತು ರಾಜಕೀಯ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳದ ನ್ಯಾಯಮೂರ್ತಿಗಳನ್ನು ಬೆದರಿಸುವ ಪ್ರಯತ್ನ ಇದಾಗಿದೆ. ಇಂತಹ ಪ್ರಯತ್ನಗಳಿಗೆ ಅವಕಾಶ ನೀಡಿದಲ್ಲಿ, ಅದು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿದೆ’ ಎಂದು ನಿವೃತ್ತ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.