ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತ, ಸಚಿವ ಅಶೋಕ್ ಚೌಧರಿ ಅವರನ್ನು ರಾಜ್ಯ ವಿಶ್ವವಿದ್ಯಾಲಯ ಸೇವಾ ಆಯೋಗವು ಸಹಾಯಕ ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಚೌಧರಿ(57) ಅವರು ಐದು ವರ್ಷಗಳ ಹಿಂದೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಪರಿಶಿಷ್ಟ ಜಾತಿ ಮೀಸಲಾತಿಯಡಿ ಅವರು ಆಯ್ಕೆಯಾಗಿದ್ದಾರೆ.
‘ನಾನು ರಾಜಕೀಯವನ್ನು ಕಲಿಸುವುದಿಲ್ಲ ಮತ್ತು ಸಹಾಯಕ ಪ್ರಾಧ್ಯಾಪಕ ವೃತ್ತಿಗೆ ಯಾವುದೇ ವೇತನವನ್ನು ಪಡೆಯುವುದಿಲ್ಲ’ ಎಂದು ಚೌಧರಿ ಹೇಳಿದ್ದಾರೆ.
‘ರಾಜಕೀಯದ ಜೊತೆಗೆ ನಾನು ಶಿಕ್ಷಣ ಕ್ಷೇತ್ರದಲ್ಲೂ ಇದ್ದೆ. ಪ್ರಮುಖ ನಿಯತಕಾಲಿಕೆಗಳಲ್ಲಿ ನನ್ನ ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ನಾನು ಪಿಎಚ್‌ಡಿ ಮಾಡಿದ್ದೇನೆ. ಕೆಲ ವರ್ಷಗಳ ಸಂಶೋಧನಾ ಪ್ರಬಂಧ ವಾಚನಕ್ಕಾಗಿ ನನಗೆ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಆಹ್ವಾನ ಬಂದಿತ್ತು. 2020ರಲ್ಲಿ ಪ್ರಾಧ್ಯಾಪಕ ಹುದ್ದೆ ಖಾಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಪ್ರಯತ್ನಿಸಿದೆ’ ಎಂದು ತಿಳಿಸಿದ್ದಾರೆ.
‘ಎರಡು ದಶಕಗಳ ರಾಜಕೀಯ ಜೀವನವನ್ನು ತ್ಯಜಿಸುವುದಿಲ್ಲ. ಎರಡನ್ನೂ ಜೊತೆಯಾಗಿ ನಿಭಾಯಿಸುತ್ತೇನೆ’ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಆದರೆ ಅಶೋಕ್ ಚೌಧರಿ ಅವರು 58ನೇ ವಯಸ್ಸಿಗೆ ಪ್ರಾಧ್ಯಾಪಕರಾಗಿದ್ದಾರೆ. ಆರ್‌ಎಸ್‌ಎಸ್ ಮೀಸಲಾತಿಗೆ ಧನ್ಯವಾದಗಳು’ ಎಂದು ಟೀಕಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.