ADVERTISEMENT

ಒಡಿಶಾ | ನಿಷೇಧಿತ ಸಂಘಟನೆ ಸಿಪಿಐನ 582 ನಕ್ಸಲರು ಶರಣು: CM ಮೋಹನ್ ಚರಣ್ ಮಾಝಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2025, 11:14 IST
Last Updated 17 ಫೆಬ್ರುವರಿ 2025, 11:14 IST
ಮೋಹನ್ ಚರಣ್ ಮಾಝಿ
ಮೋಹನ್ ಚರಣ್ ಮಾಝಿ   

ಭುವನೇಶ್ವರ: ಒಡಿಶಾದಲ್ಲಿ 2006 ರಿಂದ 2025ರ ಜನವರಿಯವರೆಗೆ ನಿಷೇಧಿತ ಸಿಪಿಐ (ಮಾವೋವಾದಿ) ನಕ್ಸಲ್‌ ಸಂಘಟನೆಯ ಒಟ್ಟು 582 ಸದಸ್ಯರು ಶರಣಾಗಿದ್ದಾರೆ ಎಂದು ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸೋಮವಾರ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಮಂಗು ಖಿಲ್ಲಾ ಪ್ರಶ್ನೆಗೆ ಉತ್ತರಿಸಿದ ಮಾಝಿ, ಶರಣಾದ 582 ಸದಸ್ಯರ ಪೈಕಿ 364 ಮಂದಿಗೆ ಸರ್ಕಾರದಿಂದ ಲಭ್ಯವಿರುವ ಯೋಜನೆಗಳನ್ನು ಒದಗಿಸಲಾಗಿದೆ. ಈ ನಿಟ್ಟಿನಲ್ಲಿ ಸುಮಾರು ₹9.62 ಕೋಟಿ ವೆಚ್ಚವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರ 2006ರಲ್ಲಿ ‘ಶರಣಾಗತಿ ಮತ್ತು ಪುನರ್ವಸತಿ ನೀತಿ‘ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರಾಜ್ಯದಲ್ಲಿ ಸಂಘರ್ಷದಲ್ಲಿ ಭಾಗಿಯಾಗಿರುವ ಸಿಪಿಐ (ಮಾವೋವಾದಿ) ನಕ್ಸಲ್‌ ಸಂಘಟನೆಯ ಕಾರ್ಯಕರ್ತರನ್ನು ಮರಳಿ ಕರೆತರಲು ಉದ್ದೇಶಿಸಿದೆ ಎಂದು ಮಾಝಿ ಸದನಕ್ಕೆ ತಿಳಿಸಿದ್ದಾರೆ.

ADVERTISEMENT

ಈ ಕಾರ್ಯಕ್ರಮದಡಿಯಲ್ಲಿ ಶರಣಾದ ಮಾವೋವಾದಿಗಳಿಗೆ ವಿವಿಧ ಪ್ರಯೋಜನಗಳನ್ನು ವಿಸ್ತರಿಸಲಾಗಿದೆ. ಶರಣಾದವರಿಗೆ ₹2.50 ಲಕ್ಷದವರೆಗೆ ಆರ್ಥಿಕ ನೆರವು, ಮನೆ ನಿರ್ಮಾಣಕ್ಕೆ ₹45 ಸಾವಿರ ಸಹಾಯವನ್ನು ಒದಗಿಸಲಾಗುವುದು ಎಂದು ಮಾಝಿ ಹೇಳಿದ್ದಾರೆ.

ಶರಣಾದ ಸಿಪಿಐ (ಮಾವೋವಾದಿ) ನಕ್ಸಲ್‌ ಸಂಘಟನೆ ಸದಸ್ಯನಿಗೆ ತಿಂಗಳಿಗೆ ₹6,000 ದಂತೆ ಗರಿಷ್ಠ 36 ತಿಂಗಳವರೆಗೆ ವೃತ್ತಿಪರ ತರಬೇತಿಯನ್ನು ಒದಗಿಸಲಾಗುವುದು. ಶರಣಾದ ಸದಸ್ಯನನ್ನು ಮದುವೆಯಾಗಲು ಆಯ್ಕೆ ಮಾಡಿಕೊಂಡರೆ ಅಥವಾ ಪತ್ನಿ ಇಲ್ಲದಿದ್ದರೆ ಅಥಂತಹವರಿಗೆ ₹25,000 ಪ್ರೋತ್ಸಾಹ ಧನ ನೀಡಲಾಗುತ್ತಿದೆ ‌ಎಂದು ಮಾಝಿ ಸದನದಲ್ಲಿ ಗಮನಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.