ADVERTISEMENT

ಎಚ್‌1ಎನ್‌1: ದೇಶದಲ್ಲಿ ಜನವರಿ–ಫೆಬ್ರುವರಿಯಲ್ಲಿ 6,700 ಪ್ರಕರಣ ಬೆಳಕಿಗೆ

ಉತ್ತರ ಭಾರತದಲ್ಲಿ ಹೆಚ್ಚು ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 7:22 IST
Last Updated 7 ಫೆಬ್ರುವರಿ 2019, 7:22 IST
   

ನವದೆಹಲಿ: ದೇಶದಲ್ಲಿ 2019ರ ಜನವರಿಯಿಂದ ಫೆಬ್ರುವರಿ 03ರ ವೇಳೆಗೆ ಬರೋಬ್ಬರಿ 6,701 ಜನರಲ್ಲಿ ಎಚ್‌1ಎನ್‌1 ಸೋಂಕು ಕಾಣಿಸಿಕೊಂಡಿದ್ದು, 226 ಮಂದಿಮೃತಪಟ್ಟಿರುವ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹಿಂದೂಸ್ತಾನ್‌ ಟೈಮ್ಸ್‌ ವರದಿಮಾಡಿದ್ದು, ಹೆಚ್ಚಿನ ಪ್ರಕರಣಗಳು ಉತ್ತರದ ರಾಜ್ಯಗಳಲ್ಲಿ ಕಾಣಿಸಿಕೊಂಡಿರುವುದನ್ನು ಉಲ್ಲೇಖಿಸಲಾಗಿದೆ.

2019ರ ಜನವರಿಯಲ್ಲಿ ಒಟ್ಟು 5740 ಜನರಲ್ಲಿ ಜ್ವರ ಕಾಣಿಸಿಕೊಂಡಿದ್ದು, ಫೆಬ್ರುವರಿಯಲ್ಲಿ ಮೊದಲ ಮೂರು ದಿನಗಳಲ್ಲಿ 961 ಖಚಿತ ಪ್ರಕರಣಗಳು ಕಾಣಿಸಿಕೊಂಡಿವೆ.ಈ ವರ್ಷ ರಾಜಸ್ಥಾನದಲ್ಲಿ ಒಟ್ಟು 2,363(85ಸಾವು) ಪ್ರಕರಣಗಳು, ದೆಹಲಿಯಲ್ಲಿ 1,011 ಪ್ರಕರಣಗಳು, ಗುಜರಾತ್‌ನಲ್ಲಿ 898(43ಸಾವು) ಪ್ರಕರಣಗಳು, ಹರಿಯಾಣದಲ್ಲಿ 490(2ಸಾವು) ಪ್ರಕರಣಗಳು ಹಾಗೂ ಮಹಾರಾಷ್ಟ್ರದಲ್ಲಿ 138(12ಸಾವು) ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿಯೂ 269 ಪ್ರಕರಣಗಳು ಬೆಳಕಿಗೆ ಬಂದಿವೆ.

ಕೇಂದ್ರ ಆರೋಗ್ಯ ಸಚಿವಾಲಯದಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂ ವರದಿಯಲ್ಲಿ, ‘2018ರಲ್ಲಿ ದೇಶದಲ್ಲಿ ಒಟ್ಟು 14,992 ಎಚ್‌1ಎನ್‌1 ಪ್ರಕರಣಗಳು ಕಾಣಿಸಿಕೊಂಡು, 1,103 ಜನರು ಮೃತಪಟ್ಟಿದ್ದರು’ ಎಂದು ಉಲ್ಲೇಖಿಸಲಾಗಿದೆ. ಅದರಂತೆ 2018ರಲ್ಲಿ ರಾಜಸ್ಥಾನದಲ್ಲಿ 2,375 ಪ್ರಕರಣಗಳು ವರದಿಯಾಗಿ 221 ಜನರು ಮೃತಪಟ್ಟಿದ್ದರು. ಮಹಾರಾಷ್ಟ್ರದಲ್ಲಿ 2,593 ಪ್ರಕರಣಗಳು ಹಾಗೂ 461 ಸಾವು, ಗುಜರಾತ್‌ನಲ್ಲಿ 2,164 ಪ್ರಕರಣಗಳು, 97 ಜನರು ಸಾವಿಗೀಡಾಗಿರುವುದು ದೃಢಪಟ್ಟಿತ್ತು. ಅದೇ ವರ್ಷ ಕರ್ನಾಟಕದಲ್ಲಿ 1,733 ಪ್ರಕರಣಗಳು ಕಾಣಿಸಿಕೊಂಡು 72 ಜನರು ಪ್ರಾಣ ಕಳೆದುಕೊಂಡಿದ್ದರು.

ADVERTISEMENT

‘ಜ್ವರ ಪ್ರಕರಣಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಳಿತಗಳು ಕಂಡುಬಂದಿವೆ. ಸೋಂಕಿನ ವಿರುದ್ಧ ಪ್ರತಿರೋಧಕ ಕ್ರಮ ಕೈಗೊಂಡ ವರ್ಷದಲ್ಲಿ ಪ್ರಮಾಣ ಕಡಿಮೆಯಾಗಿರುವುದು ತಿಳಿಯುತ್ತದೆ. ಕಳೆದ ವರ್ಚ ದೇಶದಲ್ಲಿ ಒಟ್ಟು 15,000 ಸಾವಿರ ಖಿಚಿತ ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಕೇಂದ್ರ ಆರೋಗ‌್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪ್ರೀತಿ ಸುದನ್‌ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆಆರೋಗ್ಯ ಸಚಿವಾಲಯವು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ತಂಡದ ಸಹಯೋಗದಲ್ಲಿ ರಾಜ್ಯಗಳೊಂದಿಗೆ ವೀಡಿಯೋ-ಕಾನ್ಫರೆನ್ಸ್‌ ಮೂಲಕ ಅಭಿಯಾನ ಪ್ರಾರಂಭಿಸಿದೆ. ಹೆಚ್ಚು ಪ್ರಕರಣಗಳು ವರದಿಯಾಗಿರವ ರಾಜಸ್ತಾನದೊಂದಿಗೆ ನಿಕಟ ಸಂಪರ್ಕದಲ್ಲಿರುವ ಈ ತಂಡವು ಅಭಿಯಾನದ ಮೂಲಕ ರೋಗ ನಿವಾರಣೆ ಮತ್ತು ಮೇಲ್ವಿಚಾರಣೆ ನಡೆಸುತ್ತಿದೆ. ವಿಶೇಷವಾಗಿ ಜಾಗೃತಿ ಕೊರತೆಯಿರುವಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

ವಿಶ್ವದಾದ್ಯಂತ ಪ್ರತಿವರ್ಷ ಸುಮಾರು 30–50ಲಕ್ಷ ಜನರಲ್ಲಿ ಎಚ್‌1ಎನ್‌1 ಸೇರಿದಂತೆ ಇತರೆಸೋಂಕುಗಳು ಕಾಣಿಸಿಕೊಳ್ಳುತ್ತಿದೆ. ಈ ಕಾರಣಗಳಿಂದಾಗಿಯೇ ಸುಮಾರು2.9–6.5 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ) ಅಂದಾಜಿಸಿದೆ. ತಲೆನೋವು, ಜ್ವರ, ನೆಗಡಿ, ಕೆಮ್ಮು ಮತ್ತು ಸ್ನಾಯು ಸೆಳೆತ ಎಚ್‌1ಎನ್‌1ನ ಪ್ರಮುಖ ಲಕ್ಷಣಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.